ಗೋವುಗಳ ಮೇವಿಗಾಗಿ ಅಹೋರಾತ್ರಿ ರೈತರ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

turvekere

ತುರುವೇಕೆರೆ, ಮಾ.6– ಗೋ ಶಾಲೆಯಲ್ಲಿ ಗೋವುಗಳಿಗೆ ಸಮರ್ಪಕ ಮೇವು ನೀಡುತ್ತಿಲ್ಲ ಎಂದು ಆರೋಪಿಸಿ ರೈತರು ಅಹೋರಾತ್ರಿ ಧರಣಿ ನಡೆಸಿದ ಘಟನೆ ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ಬಳಿ ನಡೆದಿದೆ.ತೀವ್ರ ಬರಗಾಲ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವತಿಯಿಂದ ತಾಲೂಕಿನ ಅರೇಮಲ್ಲೇನಹಳ್ಳಿ ಹಾಗೂ ಟಿ.ಬಿ.ಕ್ರಾಸ್ ಸೇರಿ ಎರಡು ಗೋ ಶಾಲೆಗಳನ್ನು ಪ್ರಾರಂಭ ಮಾಡಿದ್ದು, ಇದರಲ್ಲಿ ಒಂದು ರಾಸಿಗೆ ದಿನಕ್ಕೆ 8 ಕೆಜಿ. ಮೇವು ಹಾಗೂ 2 ಕೆಜಿ ಬೂಸವನ್ನು ನೀಡುತ್ತಿದ್ದರು. ಆದರೆ ತಾಲೂಕಿನ ಟಿ.ಬಿ.ಕ್ರಾಸ್ ಬಳಿಯಲ್ಲಿರುವ ಗೋ ಶಾಲೆಯಲ್ಲಿ ಸುಮಾರು ದಿನಗಳಿಂದ ಬೆಳಿಗ್ಗೆ 2ಕೆ.ಜಿ, ಸಂಜೆ 2 ಕೆ.ಜಿ ಮಾತ್ರ ನೀಡಲಾಗುತ್ತಿತ್ತು. ರೈತರು ಕೇಳಿದರೆ ಮೇವಿನ ಲೋಡ್ ಬಂದಿಲ್ಲ ಕೊರತೆ ಇದೆ ಎಂದು ಅಧಿಕಾರಿಗಳು ಸಬೂಬು ಹೇಳಿ ಸುಮ್ಮನೆ ಮಾಡಿದ್ದಾರೆ.

ಶನಿವಾರ ಸಂಜೆಯಿಂದ ಯಾವ ರಾಸುಗಳಿಗೂ ಮೇವು ನೀಡದ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ರಾಸುಗಳಿಗೆ ಮೇವು ವಿತರಿಸಿ ಎಂದು ಒತ್ತಾಯಿಸಿ ರೈತ ಸಂಘದ ಮುಖಂಡರು ಹಾಗೂ ರೈತರು ಧರಣಿ ನಡೆಸಿದ್ದಾರೆ.ರೈತ ಸಂಘದ ಹೋಬಳಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಟಿ.ಬಿ.ಕ್ರಾಸ್ ಗೋ ಶಾಲೆ ಅವ್ಯವಸ್ಥೆಯಿಂದ ಕೂಡಿದೆ, ದನಗಳು ಕುಡಿಯುವ ನೀರಿನ ತೊಟ್ಟಿಗಳನ್ನು ತೊಳೆಯುವುದಿಲ್ಲ, ಸುಮಾರು ದಿನಗಳಿಂದ ದನಗಳಿಗೆ ಸರಿಯಾದ ಮೇವು ವಿತರಿಸುತ್ತಿಲ್ಲಾ. ಅದಲ್ಲದೆ ಒಂದು ರಾಸಿಗೆ ಕನಿಷ್ಠ 5 ಕೆ.ಜಿ.ಮೇವು ನೀಡಬೇಕು ಆದರೆ ದಿನಕ್ಕೆ ಕೇವಲ 2 ಕೆ.ಜಿ. ಮೇವು ನೀಡುತ್ತಿದ್ದು ಕಾರ್ಡ್‍ನಲ್ಲಿ ಮಾತ್ರ 8 ಕೆ.ಜಿ ಎಂದು ನಮೂದು ಮಾಡುತ್ತಿದ್ದಾರೆ. ಒಂದು ಲಾರಿ ಲೋಡ್ ಮೇವು ಬಂದರೆ ಅಧರ್ ಮಾತ್ರ ಇಳಿಸಿಕೊಂಡು ಇನ್ನಧರ್ ಬೇರೆಡೆ ಇಳಿಸಲಾಗುತ್ತಿದೆ ಎಂದು ದೂರಿದರು.

ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ನಿನ್ನೆ ಮಧ್ಯಾಹ್ನ ಗೋ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ರೈತರ ಜೊತೆಯಲ್ಲಿ ಸಮಾಲೋಚನೆ ನಡೆಸಿದ ತಿಪಟೂರು ವಿಭಾಗಾಧಿಕಾರಿ ಶಿಲ್ಪ ಮಾತನಾಡಿ, ಈಗಾಗಲೇ ಒಂದು ಲೋಡ್ ಮೇವನ್ನು ತರಿಸಿ ವಿತರಿಸಲಾಗಿದೆ. ಮೇವು ವಿತರಿಸಲು ಹೊಸ ಗುತ್ತಿಗೆದಾರರಿಗೆ ನೀಡಲಾಗಿದ್ದು ಪ್ರತಿದಿನ 2 ಲೋಡ್ ಮೇವು ಬರಲಿದ್ದು ಎಲ್ಲ ರಾಸುಗಳಿಗೂ ಸಮರ್ಪಕ ಮೇವು ನೀಡಲಾಗುವುದು ಹಾಗೂ ಮೇವು ವಿತರಿಸಲು 2 ಕೌಂಟರ್ ಮಾಡಲಾಗುವುದು ಎಂದು ಬರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಟ್ಟರು.
ರೈತರಾದ ಮುದಾಸಿರ್, ಶಿವರಾಜನಾಯಕ, ,ನವೀನ್, ಶ್ರೀಕಾಂತ, ಪಾಪಣ್ಣ, ಪುರಷೋತ್ತಮ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin