ಗೌರಿ ಲಂಕೇಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ನಕ್ಸಲರು..!

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--0141545

ಬೆಂಗಳೂರು, ಸೆ.7- ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅಂತ್ಯಕ್ರಿಯೆಯಲ್ಲಿ ನಕ್ಸಲರ ಎರಡು ಗುಂಪುಗಳು ಪಾಲ್ಗೊಂಡಿದ್ದು ತಿಳಿದುಬಂದಿದೆ. ಪ್ರಭುತ್ವಕ್ಕೆ ಶರಣಾಗಿ, ಗನ್ ಕೆಳಗಿಟ್ಟು ಸಮಾಜದ ಮುಖ್ಯವಾಹಿನಿಗೆ ಬಂದಿರುವ ಮಾಜಿ ನಕ್ಸಲರ ಒಂದು ಗುಂಪಿನ ಮುಖಂಡರು ಹಾಗೂ ಬಂದೂಕಿನ ಮೂಲಕವೇ ನಾವು ನ್ಯಾಯ ಪಡೆಯುತ್ತೇವೆ ಎಂದು ಹೇಳಿ ಕಾಡಿನಲ್ಲೇ ಇರುವ ಮತ್ತೊಂದು ಗುಂಪಿನ ಹಲವು ನಕ್ಸಲರು ನಿನ್ನೆ ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ, ಮಲೆನಾಡು, ದಕ್ಷಿಣ ಕನ್ನಡ ಮುಂತಾದೆಡೆಯಿಂದ ಸುಮಾರು 15ಕ್ಕೂ ಹೆಚ್ಚು ವಿವಿಧ ವಾಹನಗಳಲ್ಲಿ ಆಗಮಿಸಿದ್ದ ನಕ್ಸಲರು ಹಾಗೂ ನಕ್ಸಲರ ಬಗ್ಗೆ ಮೃದು ಧೋರಣೆ ಹೊಂದಿದವರು ನಿನ್ನೆ ಗೌರಿ ಅವರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಗೌರಿ ಲಂಕೇಶ್ ಅವರು ಕಳೆದ 2006ರಿಂದ ನಕ್ಸಲರ ಪರವಾಗಿ ಹೋರಾಟದ ಮುಂಚೂಣಿಯಲ್ಲಿದ್ದರು. ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸಿದ್ದರು. ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಹಲವು ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೂ ತಂದಿದ್ದರು.

ನಕ್ಸಲರ ಬೇಡಿಕೆಗಳ ಈಡೇರಿಕೆ ಬಗ್ಗೆಯೂ ಕೂಡ ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ ಮುಂತಾದವರೊಂದಿಗೆ ಒಂದು ಸಮಿತಿ ಮಾಡಿ ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಿದ್ದರು. ಸಿರಿಮನೆ ನಾಗರಾಜ್, ಜುಲ್ಫಿಕರ್ ಮುಂತಾದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದಿದ್ದರು. ಇನ್ನೂ ಹಲವರನ್ನು ಕರೆತರುವ ಪ್ರಯತ್ನದಲ್ಲಿದ್ದರು. ನಕ್ಸಲರಲ್ಲಿ ಎರಡು ಭಾಗವಾಗಿ ಬಹಳಷ್ಟು ದಿನಗಳಾಗಿದ್ದವು. ಆ ಎರಡೂ ಗುಂಪಿನವರು ನಿನ್ನೆ ಗೌರಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಭಾವ ಹೊಂದಿರುವ ಗೌರಿ ಲಂಕೇಶ್ ಅವರು ಸಾಮಾಜಿಕ ಕಳಕಳಿ ಹಿನ್ನೆಲೆಯಲ್ಲಿ ಹಲವು ಕೆಲಸಗಳನ್ನು ಮಾಡುತ್ತಿದ್ದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಎಲ್ಲ ಮುದ್ರಣ ಹಾಗೂ ವಿದ್ಯುನ್ಮಾನಗಳಲ್ಲಿ ಅವರ ಹತ್ಯೆ ಘಟನೆ, ಖಂಡಿಸಿ ಪ್ರತಿಭಟನೆ, ಅಂತಿಮ ದರ್ಶನ, ಅಂತ್ಯ ಸಂಸ್ಕಾರದ ವಿಷಯ ನೇರ ಪ್ರಸಾರವಾಗಿದ್ದು ಅವರ ಕಾರ್ಯದಕ್ಷತೆಗಿಡಿದ ಕೈಗನ್ನಡಿಯಾಗಿತ್ತು.

 

Facebook Comments

Sri Raghav

Admin