ಗೌರಿ ಲಂಕೇಶ್ ಹತ್ಯೆಗೆ ನಕ್ಸಲರು ಕಾರಣರಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--0141

ಬೆಂಗಳೂರು, ಸೆ.11- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ನಕ್ಸಲರಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ನಕ್ಸಲ್ ನಾಯಕರು ಇಂದಿಲ್ಲಿ ಸ್ಪಷ್ಟಪಡಿಸಿದರು. ಮಾಜಿ ನಕ್ಸಲರಾದ ಸಿರಿಮನೆ ನಾಗರಾಜು ಮತ್ತು ನೂರ್ ಶ್ರೀಧರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿ, ಗೌರಿಲಂಕೇಶ್ ಅವರನ್ನು ನಕ್ಸಲ್ ಮುಖಂಡ ವಿಕ್ರಂಗೌಡ ಹತ್ಯೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು. ನಕ್ಸಲರು ಇದುವರೆಗೂ ಯಾವುದೇ ಪತ್ರಕರ್ತರನ್ನು ಹತ್ಯೆ ಮಾಡಿರುವ ಉದಾಹರಣೆ ಇಲ್ಲ. ನಕ್ಸಲರು ಯಾವುದೇ ಹತ್ಯೆ ಮಾಡಿದರೂ ಕೂಡಲೇ ಆ ಕುರಿತ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಕೆಲ ಸಂದರ್ಭಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ಅಪಹರಿಸಿದರೂ ಅವರನ್ನು ಕೊಲೆ ಮಾಡುವುದಿಲ್ಲ.

ಕೆಲ ಸಂದರ್ಭಗಳಲ್ಲಿ ಅಚಾತುರ್ಯವಾಗಿ ಅಥವಾ ಕೆಲವರ ಮುಂಗೋಪದಿಂದ ಹತ್ಯೆ ಮಾಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ನಕ್ಸಲರು ಕ್ಷಮಾಪಣೆ ಕೇಳುತ್ತಾರೆ. ಆದರೆ, ಗೌರಿ ಲಂಕೇಶ್ ಅವರ ಹತ್ಯೆಯ ನಂತರ ಈ ರೀತಿ ಯಾವುದೇ ಘಟನೆಗಳು ಜರುಗಿಲ್ಲದಿರುವುದನ್ನು ಗಮನಿಸಬೇಕು ಎಂದರು.
ಕೆಲ ಕಾರ್ಪೊರೇಟ್ ಮಾಧ್ಯಮಗಳು ತನಿಖೆಯ ಹಾದಿ ತಪ್ಪಿಸುತ್ತಿವೆ. ನಕ್ಸಲರಿಗೂ ಗೌರಿ ಲಂಕೇಶ್ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಆದರೆ, ಕೆಲವರು ಆದಿವಾಸಿಗಳ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿರುವ ವಿಕ್ರಮ್‍ಗೌಡರ ವಿರುದ್ಧ ಕೊಲೆ ಆರೋಪ ಹೊರಿಸುತ್ತಿರುವುದು ಖಂಡನೀಯ ಎಂದರು.
ಗೌರಿ ಹತ್ಯೆ ಹಿಂದೆ ಸಂಘ ಪರಿವಾರದ ಕೈವಾಡವಿದೆ. ಆದರೆ, ಗೃಹ ಸಚಿವರು ನಕ್ಸಲರ ಆಯಾಮದಲ್ಲಿ ತನಿಖೆ ನಡೆಸಲು ಸೂಚನೆ ನೀಡಿರುವುದು ಸರಿಯಲ್ಲ. ಬೇಕಾದರೆ ನಮ್ಮನ್ನೂ ತನಿಖೆಗೊಳಪಡಿಸಲಿ. ನಾವು ತನಿಖೆ ಎದುರಿಸಲು ಸಿದ್ದ ಎಂದು ಅವರು ಘೋಷಿಸಿದರು.

2004ರಿಂದಲೂ ಗೌರಿ ಲಂಕೇಶ್ ಅವರು ನಕ್ಸಲರೊಂದಿಗೆ ಒಡನಾಟ ಇರಿಸಿಕೊಂಡಿದ್ದರು. ಗೌರಿ ಅವರ ಬಗ್ಗೆ ನಕ್ಸಲರಲ್ಲಿ ಅಪಾರವಾದ ಗೌರವವಿತ್ತು. ಸಿರಿಮನೆ ನಾಗರಾಜ್ ಮತ್ತು ನಾನು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, 2006ರಲ್ಲಿ ಗೌರಿಲಂಕೇಶ್ ಅವರ ಅಣತಿಯಂತೆ ಉಗ್ರ ಚಟುವಟಿಕೆಯಿಂದ ಹೊರಗುಳಿದಿದ್ದೆವು ಮತ್ತು ಮುಖ್ಯವಾಹಿನಿಗೆ ಬಂದಿದ್ದೆವು ಎಂದು ನೂರ್ ಶ್ರೀಧರ್ ಹೇಳಿದರು. ನಮ್ಮ ಮೇಲೂ ಸಾವಿನ ತೂಗುಕತ್ತಿ ಇದೆ. ಆದರೆ, ನಾವು ಯಾವುದೇ ಬೆದರಿಕೆಗೂ ಮಣಿಯುವುದಿಲ್ಲ. ಗೌರಿ ಹತ್ಯೆಯಲ್ಲಿ ನಕ್ಸಲರ ಕೈವಾಡ ಇಲ್ಲ ಎನ್ನುವುದು ಸಾಬೀತಾದರೆ ಸುಳ್ಳು ಆರೋಪ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ನಕ್ಸಲರೊಂದಿಗೆ ಗೌರಿ ಉತ್ತಮ ಸಂಬಂಧ ಹೊಂದಿದ್ದರು. ಇಂತಹ ಹೀನ ಕೃತ್ಯಕ್ಕೆ ನಕ್ಸಲರು ಕೈ ಹಾಕುವುದಿಲ್ಲ ಎಂದು ಸಿರಿಮನೆ ನಾಗರಾಜ್ ಮತ್ತು ನೂರ್ ಶ್ರೀಧರ್ ಸ್ಪಷ್ಟಪಡಿಸಿದರು.

Facebook Comments

Sri Raghav

Admin