ಗೌರಿ ಲಂಕೇಶ್ ಹತ್ಯೆ : ಪಂಜರದ ಗಿಳಿಯಂತಾಗಿರುವ ಸಿಬಿಐನಿಂದ ತನಿಖೆ ಬೇಡ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-CBI

ಬೆಂಗಳೂರು, ಸೆ.9- ಸಿಬಿಐ ಕೇಂದ್ರ ಸರ್ಕಾರದ ಪಂಜರದ ಗಿಳಿಯಾಗಿದೆ. ತನ್ನ ವಿರೋಧಿಗಳ ದನಿಯನ್ನು ಅಡಗಿಸಲು ಸಿಬಿಐ ದುರ್ಬಳಕೆಯಾಗುತ್ತಿರುವುದರಿಂದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ಸದಸ್ಯರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ನರೇಂದ್ರ ದಾಬೋಲ್ಕರ್ ಅವರ ಹತ್ಯೆಯ ತನಿಖೆಯನ್ನು ಸಿಬಿಐ ನಾಲ್ಕು ವರ್ಷಗಳಿಂದ ನಡೆಸುತ್ತಿದ್ದು, ಇನ್ನೂ ಹಂತಕರ ಪತ್ತೆಯಾಗಿಲ್ಲ. ಜತೆಗೆ ಹಂತಕರ ಸುಳಿವಿನ ಬಗ್ಗೆ ಯಾವುದೇ ಪ್ರಗತಿಯೂ ಆಗಿಲ್ಲ.

ಸಿಬಿಐ ಕೇಂದ್ರ ಸರ್ಕಾರದ ಪಂಜರದ ಗಿಳಿ ಇದ್ದಂತೆ. ಹಾಗಾಗಿ ಗೌರಿ ಲಂಕೇಶ್ ಹತ್ಯೆಯನ್ನು ಸಿಬಿಐ ತನಿಖೆಗೆ ವಹಿಸುವುದು ಬೇಕಾಗಿಲ್ಲ ಎಂದು ವೇದಿಕೆಯ ಸದಸ್ಯರಾದ ನೀಲಾ ಕೆ., ದೊಡ್ಡಿಪಾಳ್ಯ ನರಸಿಂಹಮೂರ್ತಿ, ವಾಸು, ಕೆ.ವೈ.ನಾರಾಯಣಸ್ವಾಮಿ, ಶ್ರೀಪಾದಭಟ್, ಕೆ.ಶರೀಷಾ, ಮಾವಳ್ಳಿ ಶಂಕರ್, ಕೆ.ಎಲ್.ಅಶೊಕ್, ಲಕ್ಷ್ಮಿನಾರಾಯಣ ನಾಗವಾರ, ಅನಂತ ನಾಯ್ಕ, ಸತ್ಯ ಮತ್ತಿತರರು ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ.

ಗೌರಿ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಹಂತಕರನ್ನು ಪತ್ತೆಹಚ್ಚಲು ರಾಜ್ಯಸರ್ಕಾರ ಮೂರು ತನಿಖಾ ತಂಡಗಳನ್ನು ರಚಿಸಿದೆ ಹಾಗೂ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಹಾಗಾಗಿ ಈ ತನಿಖೆಯನ್ನು ಸಿಬಿಐಗೆ ವಹಿಸದೆ ಎಸ್‍ಐಟಿ ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಸದಸ್ಯರು ಪತ್ರದಲ್ಲಿ ಮನವಿ ಮಾಡಿದ್ದಾರೆ.  ಕಲಬುರ್ಗಿ ಅವರ ಹಂತಕರನ್ನು ಪತ್ತೆಹಚ್ಚುವಲ್ಲಿ ಮಾಡಿರುವ ವಿಳಂಬ ಗೌರಿ ಹತ್ಯೆಗೂ ಕಾರಣವಾಗಿದೆ ಎನ್ನುವುದನ್ನು ರಾಜ್ಯಸರ್ಕಾರ ಮನಗಂಡು ಎರಡೂ ಹತ್ಯೆಗಳ ತನಿಖೆಯನ್ನು ತೀವ್ರಗೊಳಿಸಬೇಕು ಹಾಗೂ ಕ್ಷಿಪ್ರವಾಗಿ ಹಂತಕರನ್ನು ಪತ್ತೆ ಮಾಡಬೇಕೆಂದು ಸದಸ್ಯರು ಒತ್ತಾಯಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin