ಗೌರಿ ಲಂಕೇಶ್ ಹತ್ಯೆ ಪ್ರಕರಣ : ಕುಖ್ಯಾತ ರೌಡಿಯ 6 ಸಹಚರರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು,ಸೆ.14-ಪತ್ರಕರ್ತೆ, ಪ್ರಗತಿಪರ ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಿಂದೆ ನಟೋರಿಯಸ್ ರೌಡಿ ಗ್ಯಾಂಗ್‍ನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ತನಿಖೆಯನ್ನು ನಡೆಸುತ್ತಿರುವ ಎಸ್‍ಐಟಿ ಕುಣಿಗಲ್ ಮೂಲದ ಕುಖ್ಯಾತ ರೌಡಿಯೊಬ್ಬನ ಆರು ಸಹಚರರನ್ನು ತೀವ್ರವಿಚಾರಣೆಗೆ ಒಳಪಡಿಸಿದೆ. ರಾಮನಗರದ ಜೈಲಿನಲ್ಲಿರುವ ಕುಣಿಗಲ್ ಮೂಲದ ಕುಖ್ಯಾತ ರೌಡಿಯೊಬ್ಬನ ಸಹಚರರು ಗೌರಿ ಹತ್ಯೆಯಾದ ಸಂದರ್ಭದಲ್ಲಿ ಆ ಭಾಗದಲ್ಲಿ ಓಡಾಟ ನಡೆಸಿರುವ ಬಗ್ಗೆ ಸಿಸಿ ಟಿವಿ ದೃಶ್ಯದಲ್ಲಿ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅವರೆಲ್ಲರನ್ನು ವಶಕ್ಕೆ ಪಡೆದು ವಿಶೇಷ ತನಿಖಾ ತಂಡದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಜೈಲಿನಲ್ಲಿರುವ ನಟೋರಿಯಸ್ ರೌಡಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಪ್ರಯತ್ನವನ್ನು ಎಸ್‍ಐಟಿ ನಡೆಸುತ್ತಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬೆಂಗಳೂರಿನ ರೌಡಿಶೀಟರ್‍ಗಳ ಮೇಲೂ ಕಣ್ಣಿಟ್ಟಿತ್ತು. ಸಿಸಿ ಟಿವಿ ಫುಟೇಜ್‍ಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕುಣಿಗಲ್ ಮೂಲದ ಕುಖ್ಯಾತ ರೌಡಿಯ ಸಹಚರರ ಮಾಹಿತಿ ಲಭ್ಯವಾಗಿತ್ತು. ಇವರು ಅಂದು ಅಲ್ಲಿ ಓಡಾಟ ನಡೆಸಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದಾರೆ.

ಈಗ ಜೈಲಿನಲ್ಲಿರುವ ರೌಡಿಯನ್ನು ವಿಚಾರಣೆ ನಡೆಸಬೇಕಾಗಿರುವುದರಿಂದ ಆತನನ್ನು ವಶಕ್ಕೆ ಪಡೆಯಲು ಅಗತ್ಯ ಪ್ರಕ್ರಿಯೆಯಲ್ಲಿ ತನಿಖಾ ತಂಡ ತೊಡಗಿದೆ. ಕುಣಿಗಲ್ ಮೂಲದ ಈ ರೌಡಿ ಗ್ಯಾಂಗ್ ಕಟ್ಟಿಕೊಂಡು ದರೋಡೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಸುಮಾರು 51ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರಿನಲ್ಲಿ ಕುಖ್ಯಾತ ರೌಡಿಯಾಗಬೇಕೆಂಬ ಮಹದಾಸೆಯನ್ನು ಹೊಂದಿರುವ ಈತನನ್ನು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದರು. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸುಪಾರಿ ಕಿಲ್ಲರ್ಸ್, ರಿಯಲ್‍ಎಸ್ಟೇಟ್ ಮಾಫಿಯಾ, ನಕ್ಸಲೀಯರು ಸೇರಿದಂತೆ ಎಲ್ಲರ ಮೇಲೂ ನಿಗಾ ವಹಿಸಿ ಎಸ್‍ಐಟಿ ತನಿಖೆ ನಡೆಸುತ್ತಿದೆ. ಅವರ ಕುಟುಂಬದವರು, ಆಪ್ತರು, ಸ್ನೇಹಿತರು, ಮಾಜಿ ನಕ್ಸಲರು ಎಲ್ಲರನ್ನೂ ಎಸ್‍ಐಟಿ ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಸಂಗ್ರಹಿಸುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin