ಗೌರಿ ಹತ್ಯಾವ್ಯೂಹ ಬೆನ್ನತ್ತಿರುವ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh

ಬೆಂಗಳೂರು, ಸೆ.6- ವಿಚಾರವಾದಿ ಗೌರಿಲಂಕೇಶ್ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಲು ಕಂಕಣತೊಟ್ಟಿದ್ದು, ಈಗಾಗಲೇ 500ಕ್ಕೂ ಹೆಚ್ಚು ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ.  ಗೌರಿಲಂಕೇಶ್ ಅವರ ಪತ್ರಿಕಾ ಕಚೇರಿಯಿಂದ ಅವರು ಕಾರಿನಲ್ಲಿ ರಾಜರಾಜೇಶ್ವರಿನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಅಳವಡಿಸಿರುವ ಎಲ್ಲಾ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ಗೌರಿ ನಿವಾಸದ ಸಮೀಪ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಆಕೆಗೆ ಗುಂಡಿಟ್ಟ ಕಿಡಿಗೇಡಿಯೊಬ್ಬನ ಮಸುಕು ಮಸುಕಾದ ಚಿತ್ರ ಮಾತ್ರ ಲಭ್ಯವಾಗಿದೆ. ಉಳಿದಂತೆ ಹತ್ಯೆ ನಡೆಸಲು ಆರೋಪಿಗಳು ಬಳಸಿದ್ದ ಡಿಯೋ ವಾಹನಗಳ ನೋಂದಣಿ ಸಂಖ್ಯೆ ಕಾಣದಿರುವುದು ಪೊಲೀಸರ ನಿದ್ದೆಗೆಡಿಸಿದೆ. ಆದರೂ, ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದು, ಸಿಕ್ಕಿರುವ ಆರೋಪಿಯ ಮಸುಕು ಮಸುಕಾದ ಚಿತ್ರವನ್ನೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಆರೋಪಿಯ ಮುಖ ಚಹರೆಯನ್ನು ಪತ್ತೆಹಚ್ಚಲು ತೀರ್ಮಾನಿಸಿದ್ದಾರೆ.

ಮೊಬೈಲ್ ನಂಬರ್ ಟ್ರೇಸ್:

ಹತ್ಯೆಯಾದ ಗೌರಿಲಂಕೇಶ್ ಅವರ ಮೊಬೈಲ್‍ಗೆ ಬಂದ ಒಳ ಮತ್ತು ಹೊರ ಹೋಗುವ ಕರೆಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಗೌರಿ ಅವರಿಗೆ ಎರಡು ನಂಬರ್‍ಗಳಿಂದ ನಿರಂತರವಾಗಿ ಮಿಸ್ಡ್‍ಕಾಲ್ ಬರುತ್ತಿತ್ತು.  ಕೆಲವು ಕಿಡಿಗೇಡಿಗಳು ಬೆದರಿಕೆ ಕರೆಗಳನ್ನು ಮಾಡುತ್ತಿದ್ದು, ಕೆಲ ಸಂದರ್ಭದಲ್ಲಿ ಬ್ಲ್ಯಾಂಕ್ ಮೆಸೆಜ್‍ಗಳನ್ನು ಕಳುಹಿಸುತ್ತಿದ್ದರು. ಆದರೂ, ಈ ಕುರಿತಂತೆ ಗೌರಿ ಲಂಕೇಶ್ ಅವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ, ಪೊಲೀಸರು ಮೊಬೈಲ್ ತಪಾಸಣೆ ನಡೆಸಿದ ಸಂದರ್ಭದಲ್ಲಿ ಮಿಸ್ಡ್‍ಕಾಲ್ ಬರುತ್ತಿದ್ದ ಒಂದು ಮೊಬೈಲ್ ನಂಬರ್‍ಅನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.
ಈ ನಂಬರ್‍ನ ಜಾಡು ಹಿಡಿದಿರುವ ಪೊಲೀಸರು ಮಿಸ್ಡ್‍ಕಾಲ್ ನೀಡುತ್ತಿದ್ದ ವ್ಯಕ್ತಿಯ ಮೊಬೈಲ್ ಟವರ್‍ಅನ್ನು ಗೌರಿ ಪ್ರತಿನಿತ್ಯ ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸುತ್ತಿದ್ದ ಬಂಕ್ ಸಮೀಪವಿರುವುದನ್ನು ಗುರುತಿಸಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ನಕ್ಸಲ್ ಕೈವಾಡವಿರಬಹುದೇ ?:

ನಕ್ಸಲರ ಬಗ್ಗೆ ಅನುಕಂಪಹೊಂದಿದ್ದ ಗೌರಿಲಂಕೇಶ್ ಅವರು ತಮ್ಮ ಹಕ್ಕಿನ ಹೋರಾಟಕ್ಕಾಗಿ ಬಂದೂಕಿಗೆ ಮೊರೆ ಹೋಗಿದ್ದ ಹಲವಾರು ಕೆಂಪು ಉಗ್ರರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಬಂದೂಕಿನಿಂದ ಯಾವುದೇ ಪರಿಹಾರ ದೊರಕುವುದಿಲ್ಲ. ಏನಿದ್ದರೂ ಮುಖ್ಯವಾಹಿನಿಗೆ ಬಂದು ಪ್ರತ್ಯಕ್ಷವಾಗಿ ಹೋರಾಟ ನಡೆಸಬೇಕು ಎಂದು ನಕ್ಸಲರಿಗೆ ಗೌರಿ ಹೇಳುತ್ತಿದ್ದ ಬುದ್ದಿವಾದ ಕೆಲ ನಕ್ಸಲರ ಕಣ್ಣನ್ನು ಕೆಂಪಾಗಿಸಿತ್ತು.  ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆ ಹಿಂದೆ ನಕ್ಸಲರ ಕೈವಾಡ ಇರಬಹುದೇ ಎಂದು ಶಂಕಿಸಿರುವ ಪೊಲೀಸರು, ಈ ನಿಟ್ಟಿನಲ್ಲೂ ಮಾಹಿತಿ ಕಲೆಹಾಕುತ್ತಿದ್ದಾರೆ.

ಸ್ಕೆಚ್ ವಿಫಲ:

ಕಳೆದ ಮೂರ್ನಾಲ್ಕು ತಿಂಗಳಿನಿಂದ ಗೌರಿಲಂಕೇಶ್ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ. ಪ್ರತಿನಿತ್ಯ ಅವರ ಚಲನವಲನಗಳನ್ನು ಕಿಡಿಗೇಡಿಗಳು ಗಮನಿಸುತ್ತಿದ್ದರು ಎಂದು ತಿಳಿದು ಬಂದಿದೆ.ಮೂರು ದಿನಗಳ ಹಿಂದೆ ಗೌರಿ ಹತ್ಯೆಗೆ ಆರೋಪಿಗಳು ಸ್ಕೆಚ್ ಹಾಕಿದ್ದರು ಎನ್ನಲಾಗಿದ್ದು, ಆರ್.ಆರ್.ನಗರದಲ್ಲಿರುವ ಅವರ ಮನೆ ಸಮೀಪವೇ ಶೂಟ್ ಮಾಡಲು ತೀರ್ಮಾನಿಸಿದ್ದರು. ಆದರೆ, ಆಕ್ಷಣದಲ್ಲಿ ಸ್ಥಳೀಯರು ರಸ್ತೆಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮ ಯೋಜನೆಯಿಂದ ಹಿಂದೆ ಸರಿದ ಆರೋಪಿಗಳು, ಯಾರೂ ಇಲ್ಲದ ಸಮಯ ಸಾಧಿಸಿ ನಿನ್ನೆ ತಮ್ಮ ಟಾರ್ಗೆಟ್‍ನಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

ನಾಕಾಬಂದಿ:

ಗೌರಿ ಹತ್ಯೆ ಆರೋಪಿಗಳು ಎರಡು ಡಿಯೋ ವಾಹನಗಳಲ್ಲಿ ಬಂದಿದ್ದರು ಎಂಬ ಸುಳಿವಿನ ಹಿನ್ನೆಲೆಯಲ್ಲಿ ನಗರದ ಅಷ್ಟ ದಿಕ್ಕುಗಳಲ್ಲೂ ಪೊಲೀಸರು ದಿಗ್ಬಂಧನ ವಿಧಿಸಿದ್ದಾರೆ.ನಗರದಿಂದ ಹೊರ ಹೋಗುವ ಎಲ್ಲಾ ರಸ್ತೆಗಳಲ್ಲೂ ನಾಕಾಬಂದಿ ಏರ್ಪಡಿಸಲಾಗಿದ್ದು, ಪ್ರತೀ ವಾಹನಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಮೈಸೂರು ರಸ್ತೆ ಹಾಗೂ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಹಾದಿಯಲ್ಲಿರುವ ಸಿಸಿ ಟಿವಿಗಳಲ್ಲಿ ಡಿಯೋ ವಾಹನಗಳು ಚಲಿಸುವಿಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಾಮ್ಯತೆ ಪರಿಶೀಲನೆ:

ಕಳೆದ ಎರಡು ವರ್ಷಗಳ ಹಿಂದೆ ಧಾರವಾಡದಲ್ಲಿ ನಡೆದ ವಿಚಾರವಾದಿ ಎಂ.ಎಂ.ಕಲಬುರಗಿ ಹತ್ಯೆಗೂ ಗೌರಿ ಲಂಕೇಶ್ ಹತ್ಯೆಗೂ ಸಾಮ್ಯತೆ ಇದ್ದು, ಕಲಬುರಗಿ ಹಂತಕರೇ ಗೌರಿ ಹತ್ಯೆಯಲ್ಲೂ ಭಾಗಿಯಾಗಿದ್ದಾರೆಯೇ ಎಂಬ ದಿಕ್ಕಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡು ವರ್ಷ ಕಳೆದರೂ ಕಲಬುರಗಿ ಹಂತಕರನ್ನು ಬಂಧಿಸಲು ಸಾಧ್ಯವಾಗದೆ ಕೈಚೆಲ್ಲಿರುವ ಪೊಲೀಸರಿಗೆ ಗೌರಿ ಹತ್ಯೆ ಪ್ರಕರಣ ಸವಾಲಾಗಿ ಪರಿಗಣಿಸಿದ್ದು, ಸಾರ್ವಜನಿಕರ ಕೆಂಗಣ್ಣಿನಿಂದ ಪಾರಾಗುವ ಉದ್ದೇಶದಿಂದ ಗೌರಿ ಹಂತಕರಿಗೆ ಎಡೆಮುರಿ ಕಟ್ಟಲು ಇನ್ನಿಲ್ಲದ ಸಾಹಸಕ್ಕೆ ಕೈ ಹಾಕಿದ್ದಾರೆ.

Facebook Comments

Sri Raghav

Admin