ಗ್ಯಾಂಗ್ರೇಪ್ ಪ್ರಕರಣ : ಎಸ್ಪಿ ಮುಖಂಡ ಗಾಯತ್ರಿ ಪ್ರಜಾಪತಿ ಬಂಧನ
ಲಕ್ನೋ, ಮಾ.15-ಗ್ಯಾಂಗ್ರೇಪ್ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಸಚಿವ ಗಾಯತ್ರಿ ಪ್ರಜಾಪತಿಯನ್ನು ಉತ್ತರಪ್ರದೇಶದ ಲಕ್ನೋದಲ್ಲಿ ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ. ಆತ್ಯಾಚಾರ ಆರೋಪದ ಸಂಬಂಧ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಪ್ರಜಾಪತಿ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ದಾಖಲಿಸಿಕೊಂಡಿದ್ದರು. ಎಫ್ಐಆರ್ ದಾಖಲಾಗುತ್ತಿದ್ದಂತೆ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿದ್ದ ಪ್ರಜಾಪತಿ ಕಳೆದ 15 ದಿನಗಳ ಹಿಂದೆಯೇ ನಾಪತ್ತೆಯಾಗಿದ್ದ. ಎಸ್ಪಿ ಮುಖಂಡನ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.
ಕಳೆದ ಬಾರಿ ಅಮೇಥಿ ವಿಧಾನಸಭಾ ಕ್ಷೇತ್ರದಿಂದ ಚುನಾಯಿತನಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂಪುಟದಲ್ಲಿ ಸಚಿವನಾಗಿದ್ದ ಪ್ರಜಾಪತಿ ಈ ಚುನಾವಣೆಯಲ್ಲಿ ಪರಾಭವಗೊಂಡಿದ್ದ. ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆ ಅಪ್ರಾಪ್ತ ಮಗಳ ಮೇಲೂ ಲೈಂಗಿಕ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಪ್ರಜಾಪತಿ ಮತ್ತು ಇತರ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇವರ ಬಂಧನಕ್ಕಾಗಿ ಸುಪ್ರೀಂಕೋರ್ಟ್ ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಿತ್ತು.
ಆತ್ಯಾಚಾರ ಆರೋಪಿ ಗಾಯತ್ರಿ ಪ್ರ ಜಾಪತಿಯನ್ನು ಲಕ್ನೋದ ಆಶಿಯಾನ ಪ್ರದೇಶದಲ್ಲಿ ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ಉತ್ತರಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ದಲ್ಜೀತ್ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS