ಗ್ಯಾಂಗ್ ಲೀಡರ್ ಭಾಗ್ಯ ಸೇರಿ 10 ಮಂದಿ ಹೆದ್ದಾರಿ ದರೋಡೆಕೋರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Bhagya-Gang------01

ಮೈಸೂರು, ಜ.13- ಮಹಿಳಾ ಗ್ಯಾಂಗ್ ಲೀಡರ್ ಸೇರಿದಂತೆ 10 ಮಂದಿ ಹೆದ್ದಾರಿ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದು, ಅವರ ಪೈಕಿ ಕಾನೂನು ಸಂಘರ್ಷಕ್ಕೆ ಒಳಗಾದವನೊಬ್ಬ ಸೇರಿದ್ದಾನೆಂದು ನಗರ ಪೊಲೀಸ್ ಆಯುಕ್ತ ಸುಬ್ರಹ್ಮೇಶ್ವರ್ ರಾವ್ ತಿಳಿಸಿದ್ದಾರೆ.  ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಮೂಲದ ಗ್ಯಾಂಗ್ ಲೀಡರ್ ಭಾಗ್ಯ, ರವಿಕುಮಾರ್, ಶ್ರೀರಂಗಪಟ್ಟಣದ ಸುನಿಲ್, ಮೈಸೂರಿನ ಮಧುಸೂದನ್, ಶರತ್‍ಕುಮಾರ್, ಕಾರ್ತಿಕ್, ಅರ್ಜುನ್, ದರ್ಶನ್, ಮಂಜುನಾಥ್, ಸತೀಶ್ ಎಂಬುವರು ಹೆದ್ದಾರಿಯಲ್ಲಿ ದರೋಡೆ ನಡೆಸಿ ತಮಿಳುನಾಡು, ಕೇರಳಕ್ಕೆ ತೆರಳುತ್ತಿದ್ದರು.

ಮೈಸೂರು ಸಮೀಪದ ಮಹದೇವಪುರ ವಾಸಿ ದ್ವಾರಕೀಶ್ ಎಂಬುವರು ಕಳೆದ ಡಿ.22ರಂದು ರಾತ್ರಿ ಬಂಡಿಪಾಳ್ಯದಿಂದ ಶ್ರೀರಾಮಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಕೊಪ್ಪಲೂರು ಬಳಿ ಇನ್ನೋವಾ ಕಾರಿನಲ್ಲಿ ಬಂದ ಭಾಗ್ಯ ಗುಂಪು ಅವರನ್ನು ಅಡ್ಡಗಟ್ಟಿ ಅವರ ಬಳಿ ಇದ್ದ 16,75,000ರೂ. ಹಣ ದೋಚಿ ಪರಾರಿಯಾಗಿದ್ದರು.ಈ ಸಂಬಂಧ ದ್ವಾರಕೀಶ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದರು.ದರೋಡೆಕೋರರು ದರೋಡೆ ನಡೆಸಿ ತಮಿಳುನಾಡು, ಕೇರಳದಲ್ಲಿ ತಲೆಮರೆಸಿಕೊಂಡಿದ್ದು, ವಾಪಸ್ ಮೈಸೂರಿಗೆ ಹಿಂದಿರುಗುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 3,05,000 ನಗದು ಸೇರಿದಂತೆ 2 ಇನ್ನೋವಾ ಕಾರು, ದ್ವಿಚಕ್ರ ವಾಹನಗಳು, ಕೇಬಲ್‍ಗಳು, ಮಾರಕಾಸ್ತ್ರಗಳು ಸೇರಿದಂತೆ ಒಟ್ಟು 18,98,000ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗ್ಯಾಂಗ್‍ಲೀಡರ್ ಭಾಗ್ಯಳ ಹಿನ್ನೆಲೆ:

ಭಾಗ್ಯ ಮೈಸೂರಿನ ಕಲ್ಯಾಣಗಿರಿಯಲ್ಲಿ ವಾಸಿಸುತ್ತಿದ್ದು, ಐಶಾರಾಮಿ ಜೀವನ ನಡೆಸಲು ಲೇವಾದೇವಿ, ರಿಯಲ್ ಎಸ್ಟೇಟ್ ನಡೆಸುತ್ತಿದ್ದಳು. ಆದರೆ, ಈ ಎರಡರಲ್ಲೂ ಹಣ ಸಂಪಾದಿಸಲು ಸಾಧ್ಯವಾಗದೆ ಇರುವಾಗ ಶಾಲೆ ಬಿಟ್ಟವರು, ದಿನಗೂಲಿಯವರಿಗೆ ಹಣದ ಆಮಿಷ ತೋರಿಸಿ ದರೋಡೆ ನಡೆಸುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin