ಗ್ರಾಪಂ ಟ್ಯಾಂಕ್‍ನಲ್ಲಿ ನೀರು ಹಿಡಿಯಲು ತಗಾದೆ ಖಂಡಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಆ.27- ಸಾರ್ವಜನಿಕರಿಗೆಂದು ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿದ್ದ ಟ್ಯಾಂಕ್‍ನಲ್ಲಿ ನೀರು ಹಿಡಿಯಲು ಹೋದ ಗ್ರಾಮಸ್ಥರನ್ನು ಗ್ರಾಪಂ ಅಧ್ಯಕ್ಷೆ ಮತ್ತು ಆಕೆಯ ಪತಿ ತಡೆದು ಅವಾಚ್ಯವಾಗಿ ನಿಂದಿಸಿದರು ಎಂದು ಆರೋಪಿಸಿ ದೊಡ್ಡಬ್ಯಾಡಿಗೆರೆ ಗ್ರಾಮಸ್ಥರು ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಅಧ್ಯಕ್ಷೆ ಹಾಗೂ ಆಕೆಯ ಪತಿ ಮತ್ತು ನೀರುಗಂಟಿ ಹೊನ್ನಯ್ಯ ವಿರುದ್ದ ಪ್ರತಿಭಟನೆ ನಡೆಸಿದರು.ಹೆಬ್ಬಾಳು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಅಧ್ಯಕ್ಷೆ ಹಾಗೂ ಆಕೆಯ ಪತಿ ವಿರುದ್ದ ಪ್ರತಿಭಟನೆ ನಡೆಸಿ ಮಾತನಾಡಿದ ದೊಡ್ಡಬ್ಯಾಡಿಗೆರೆ ಗ್ರಾಮದ ಪ್ರಸನ್ನ, ಗ್ರಾಮದಲ್ಲಿ ವಾಸಿಸುವ ದಲಿತರ ಕಾಲೋನಿಯಲ್ಲಿ ಎರಡು ನೀರಿನ ಸಿಸ್ಟನ್ ಟ್ಯಾಂಕ್‍ಗಳಿದೆ.

ಅದರಲ್ಲಿ ಒಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮರ ಮನೆ ಮುಂದಿದೆ, ಮತ್ತೊಂದು ದೂರದಲ್ಲಿದೆ. ಆದರೆ ಕಳೆದ ಒಂದು ವಾರದಿಂದ ಸರಿಯಾಗಿ ನೀರು ಬಿಡದಿರುವುದರಿಂದ ನೀರಿಗೆ ಬಹಳ ತೊಂದರೆ ಆಗಿದೆ. ಆದರೆ ಸರ್ಕಾರದ ಹಣದಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮರ ಮನೆ ಮುಂದೆ ನಿರ್ಮಿಸಿರುವ ಸಿಸ್ಟನ್‍ನಲ್ಲಿ ಗ್ರಾಮದವರು ನೀರು ಹಿಡಿಯಲು ಕೊಡಗಳನ್ನು ಇಟ್ಟರೆ, ಅಧ್ಯಕ್ಷೆ ಶಾಂತಮ್ಮ ಮತ್ತು ಆಕೆಯ ಪತಿ ರಂಗಸ್ವಾಮಿ ಕೊಡಗಳನ್ನು ಕಾಲಿನಲ್ಲಿ ಒದ್ದು, ಇಲ್ಲಿ ಯಾರು ನೀರಿಡಿಯಲು ಬರಬಾರದು ಎಂದು ಹೇಳಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

ಈ ಗ್ರಾಮಕ್ಕೆ ನೀರು ಬಿಡುವ ಹೊನ್ನಯ್ಯ ಎಂಬುವವರು ಅಧ್ಯಕ್ಷೆ ಶಾಂತಮ್ಮ ಮತ್ತು ಆಕೆಯ ಪತಿ ರಂಗಸ್ವಾಮಿ ಹೇಳಿದಂತೆ ಕೇಳಿಕೊಂಡು ಸರಿಯಾಗಿ ನೀರು ಬಿಡುವುದಿಲ್ಲ. ಕೇಳಿದರೆ ಹೊನ್ನಯ್ಯನು ಸಹ ಬಾಯಿಗೆ ಬಂದಂತೆ ಮಾತನಾಡುವುದಲ್ಲದೆ ಅಧ್ಯಕ್ಷರು ಹೇಳಿದರೆ ಮಾತ್ರ ನೀರು ಬಿಡುತ್ತೇನೆ ಇಲ್ಲದಿದ್ದರೆ ನೀರು ಬಿಡುವುದಿಲ್ಲ ಎನ್ನುತ್ತಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಗ್ರಾಮದ ಶಂಕರಮ್ಮ ಮಾತನಾಡಿ, ನಮ್ಮ ಗ್ರಾಮದಲ್ಲಿ ನೀರನ್ನು ಹಿಡಿದು ಸುಮಾರು ದಿನಗಳೆ ಆಗಿದೆ, ನೀರಿಗೆ ಹೋದಾಗಲೆಲ್ಲ ಬಾಯಿಗೆ ಬಂದಂತೆ ಬೈಯುತ್ತಾರೆ.

ಅಲ್ಲದೆ ನೀಗಂಟಿ ಹೊನ್ನಯ್ಯ ಮನಸ್ಸಿಗೆ ಬಂದಾಗ ಮತ್ತು ಶ್ರೀಮಂತರು ಮತ್ತು ಅಧ್ಯಕ್ಷರ ಮನೆಯವರು ಹೇಳಿದರೆ ಮಾತ್ರ ನೀರು ಬಿಡುತ್ತಾರೆ. ಆದ್ದರಿಂದ ನಮ್ಮ ಗ್ರಾಮದ ಪ್ರತಿ ಮನೆಗಳಿಗೂ ಪಂಚಾಯಿತಿಯಿಂದ ನಲ್ಲಿಗಳನ್ನು ಹಾಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದೊಡ್ಡಬ್ಯಾಡಿಗೆರೆ ಗ್ರಾಮದ ದಿನೇಶ್, ಶಾರದಮ್ಮ, ರಾಜು, ರವಿ, ಹರೀಶ್, ರತ್ನಮ್ಮ, ವೆಂಕಟೇಶ್, ದೇವರಾಜು, ಸುಧಾ ಹಾಗೂ ದೊಡ್ಡಬ್ಯಾಡಿಗೆರೆ ಗ್ರಾಮಸ್ಥರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin