ಗ್ರಾಮವಿಕಾಸ ಯೋಜನೆಗೆ ದತ್ತ ಚಾಲನೆ
ಕಡೂರು, ಅ.17- ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿನ 32 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವಿಸ್ತೃತ ವರದಿಯಲ್ಲಿ 1200 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.ಚಿಕ್ಕಬಳ್ಳೇಕೆರೆ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚಿತ್ರದುರ್ಗ ಕಾಲುವೆಯ ಮೂಲಕ ಕಡೂರಿನ 3 ಕೆರೆಗಳಿಗೆ ಮಾತ್ರ ನೀರು ತುಂಬಿಸುವ ಅವಕಾಶವಿತ್ತು. ಆದರೆ ನಂತರದಲ್ಲಿ ಆಂದಿನ ಮುಖ್ಯ ಮಂತ್ರಿ ಸದಾನಂದಗೌಡರು ಮತ್ತೆ ಆ ಯೋಜನೆಯ ರೀ ಸರ್ವೆ ಮಾಡಿಸಿ ಚಿತ್ರದುರ್ಗ ಕ್ಯಾನಲ್ ಮೂಲಕ ಕಡೂರು ತಾಲ್ಲೂಕಿನ 29 ಕೆರೆಗಳಿಗೆ ನೀರು ತುಂಬಿಸುವ ಅವಕಾಶ ಕಲ್ಪಿಸಿದರು ಎಂದು ಸ್ಮರಿಸಿದರು.
12,345 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಕಡೂರು ತಾಲ್ಲೂಕಿನಲ್ಲಿ 1,200 ಕೋಟಿಗಳನ್ನು ಈ ಕಾಮಗಾರಿಗಾಗಿಯೇ ವೆಚ್ಚಮಾಡಲಾಗುತ್ತದೆ ಎಂದು ವಿಸ್ತೃತ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ಈ ಭಾಗದ ರೈತರ ಬದುಕು ಹಸನಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದರು.ಹಿಂದೆ ವರ್ಷಕ್ಕೆ 5 ಗ್ರಾಮಗಳನ್ನು ಸುವರ್ಣಗ್ರಾಮ ಎಂದು ಗುರುತಿಸಿ ಅಭಿವೃದ್ಧಿ ಪಡಿಸಲು ಅವಕಾಶವಿತ್ತು. ಆದರೆ ಈ ಯೋಜನೆಯಲ್ಲಿ ಕೇವಲ 5 ಗ್ರಾಮಗಳಿಗೆ ಮಾತ್ರ ಈ ಭಾಗ್ಯ ಸಿಗುತ್ತದೆ. 75 ಲಕ್ಷ ಅನುದಾನ ಸಿಗುತ್ತದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಈ ಯೋಜನೆಯ ಉದ್ದೇಶ ಎಂದರು.
ಜಿಪಂಸದಸ್ಯೆ ವನಮಾಲದೇವರಾಜು ಮಾತನಾಡಿ, ಗ್ರಾಮ ವಿಕಾಸ ಯೋಜನೆಯಲ್ಲಿ ಸಿದ್ದಪಡಿಸಿರುವ ಕ್ರಿಯಾಯೋಜನೆಯಂತೆ ಕಾಮಗಾರಿಗಳು ಗುಣಮಟ್ಟ ಉಳಿಸಿಕೊಳ್ಳಬೇಕು. ಕೇವಲ 3 ತಿಂಗಳ ಹಿಂದೆ ಮಾಡಿದ ಹುರುಕನಹಳ್ಳಿ ರಸ್ತೆ ಕಿತ್ತು ಹೋಗಿದೆ. ಈ ರೀತಿಯಾಗದಂತೆ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದರು.ಗ್ರಾಪಂಅಧ್ಯಕ್ಷ ಲೋಕಪ್ಪ, ತಾಪಂ ಸದಸ್ಯ ಪುಟ್ಟಸ್ವಾಮಿ, ಸದಸ್ಯೆ ರಶ್ಮಿಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮುಖಂಡರಾದ ಬಿಸಲೇಹಳ್ಳಿ ಕೆಂಪರಾಜು, ಸೀಗೇಹಡ್ಲು ಹರೀಶ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ವೀರೇಶ್, ಪಿಡಿಓ ಬಾಲಾಜಿನಾಯ್ಕ ಮತ್ತಿತರರು ಇದ್ದರು.
► Follow us on – Facebook / Twitter / Google+