ಘಮ ಘಮಿಸುತ್ತಿದೆ ‘ಮನಸು ಮಲ್ಲಿಗೆ’
ಮುಗ್ದ ಪ್ರೇಮಿಗಳ ವಿನೂತನ ಕಥಾಹಂದರ ಹೊಂದಿರುವ ಚಿತ್ರ ಮನಸು ಮಲ್ಲಿಗೆ ಕಳೆದವಾರವಷ್ಟೇ ರಾಜ್ಯಾದ್ಯಂತ ತೆರೆಕಂಡಿತ್ತು. ಚಿತ್ರದ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕರಾದ ಎಸ್.ನಾರಾಯಣ್ ಹಾಗೂ ಪ್ರಮುಖ ಕಲಾವಿದರಾದ ನಿಶಾಂತ್ ಹಾಗೂ ರಿಂಕು ರಾಜಗುರು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಮರಾಠಿ ಭಾಷೆಯಲ್ಲಿ ನಿರ್ಮಾಣವಾಗಿ ಯಶಸ್ವಿ ಪ್ರದರ್ಶನ ಕಂಡ ಸೈರಾಟ್ ಚಿತ್ರದ ರೀಮೇಕ್ ಆಗಿ ಮನಸು ಮಲ್ಲಿಗೆ ಮೂಡಿ ಬಂದಿದೆ.ನಿರ್ದೇಶಕ ಎಸ್.ನಾರಾಯಣ್ ಮಾತನಾಡಿ, ಕೆಲವೇ ತಿಂಗಳ ಹಿಂದೆ ಈ ಚಿತ್ರ ಆರಂಭವಾಗಿತ್ತು. ಮರಾಠಿಯಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಇಡೀ ದೇಶದಲ್ಲೇ ದೊಡ್ಡ ಸಂಚಲನವನ್ನುಂಟು ಮಾಡಿತ್ತು. ಜೀ ಎಂಟರ್ಟೈನ್ಮೆಂಟ್ನ ವ್ಯವಸ್ಥಾಪಕರಾದ ಆಕಾಶ ಚಾವ್ಲಾ ಈ ಚಿತ್ರದ ಮೂಲ ಪಾಲುದಾರರು.
ರಾಕ್ಲೈನ್ ವೆಂಕಟೇಶ್ ಹಾಗೂ ಇವರಿಬ್ಬರೂ ಸೇರಿ ನಾಲ್ಕು ಭಾಷೆಗಳಲ್ಲಿ ರೀಮೇಕ್ ರೈಟ್ಸ್ ಪಡೆದಿದ್ದರು. ಆರಂಭದಲ್ಲಿ ಕನ್ನಡದಲ್ಲೇ ಮಾಡೋಣ ಎಂದು ಮಾಡಿದ್ದೇವೆ. ನಾಯಕಿ ಪಾತ್ರವನ್ನು ರಿಂಕು ಅವರಿಂದಲೇ ಮಾಡಿಸಬೇಕು ಎಂದು ಅವರ ತಂದೆಯ ಬಳಿ ಕೇಳಿದಾಗ ಮೊದಲು ಒಪ್ಪಲಿಲ್ಲ. ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ ಸ್ಟಡಿ ಮುಗೀಲಿ ಎಂದರು.ನಂತರ ತುಂಬಾ ಒತ್ತಾಯಿಸಿದಾಗ ಒಪ್ಪಿದರು. ಆದರೆ, ರಿಂಕುಗೆ ಕನ್ನಡ ಬರ್ತಿರಲಿಲ್ಲ. ಆದರೆ, ಹೇಳಿಕೊಟ್ಟಿದ್ದನ್ನು ಚಾಚೂತಪ್ಪದೆ ಪಾಲಿಸುವ ಚಾತುರ್ಯತೆ ಇದೆ. ಸಂಗೀತ ನಿರ್ದೇಶಕರೂ ತುಂಬಾ ಬ್ಯುಸಿ ಇದ್ದರು. ಕೊನೆಗೆ ಅವರನ್ನು ಕೂಡ ಒಪ್ಪಿಸಲಾಯಿತು. ನಾಯಕನ ಪಾತ್ರಕ್ಕೆ ಫೇಸ್ಬುಕ್ನಲ್ಲಿ ಸಣ್ಣದಾಗಿ ಹಾಕಿದಾಗ 8ಸಾವಿರ ಜನ ಬಂದರು. ಯಾರು ಇಷ್ಟವಾಗಲಿಲ್ಲ. ಒಮ್ಮೆ ರಾಕ್ಲೈನ್ ವೆಂಕಟೇಶ್ ಅವರೇ ಒಂದು ಫೋಟೋ ತೋರಿಸಿದರು.
ತುಂಬಾ ಚೆನ್ನಾಗಿ ಸೂಟ್ ಆಗುವಂತಹದ್ದು, ಖಳನಟ ಸತ್ಯಪ್ರಕಾಶ್ ಅವರ ಪುತ್ರ ಅದ್ಭುತವಾಗಿ ಪಾತ್ರ ನಿರ್ವಹಿಸಿದ್ದಾನೆ. ಅಂಬರೀಶ್ ಹಾಗೂ ಯಶ್ ಸಹ ಈ ಸಿನಿಮಾ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡರು. ಕಳೆದ 30 ವರ್ಷದಲ್ಲಿ ಎಂದೂ ಅತ್ತಿರದ ಅಂಬರೀಶ್ ಈ ಸಿನಿಮಾ ನೋಡಿ ಅತ್ತಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡುತ್ತಾ, ಕ್ಲೈಮ್ಯಾಕ್ಸ್ನಲ್ಲಿ ಎದುರಾಗುವ ಅನಿರೀಕ್ಷಿತ ದೃಶ್ಯವೇ ಚಿತ್ರದ ಹೈಲೈಟ್. ಮುಂದೆ ಪ್ರೀತಿ ಮಾಡುವವರಿಗೆ ಪ್ರೀತಿ ಮಾಡುತ್ತಿರುವವರಿಗೆ ಪೋಷಕರಿಗೆ ಎಲ್ಲರಿಗೂ ಈ ಸಿನಿಮಾದಲ್ಲಿ ಸಂದೇಶವಿದೆ. ಮರಾಠಿಯಲ್ಲಿ ನೂರು ಕೋಟಿ ಗಳಿಸಿದೆ. ಸದ್ಯದಲ್ಲೇ ತಮಿಳು, ತೆಲುಗಿನಲ್ಲೂ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ಚಿತ್ರಕ್ಕೆ ಮನೋಹರ್ ಜೋಶಿಯವರ ಕ್ಯಾಮೆರಾ ಕೈಚಳಕ ಬಹಳ ಸೊಗಸಾಗಿ ಮೂಡಿ ಬಂದಿದೆ.ಈ ಚಿತ್ರವನ್ನು ಅತಿ ಶೀಘ್ರದಲ್ಲಿ ವಿದೇಶಗಳಲ್ಲಿಯೂ ಬಿಡುಗಡೆಗೊಳಿಸಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆಯಂತೆ. ಒಟ್ಟಾರೆ ಮರ್ಯಾದಾ ಹತ್ಯೆ ಕಥಾ ಎಳೆಯನ್ನು ಹೊಂದಿಕೊಂಡಂತಿರುವ ಈ ಚಿತ್ರವು ಇಂದಿನ ಯುವ ಪೀಳಿಗೆಗೆ ಹೇಳಿ ಮಾಡಿಸಿದಂತಹ ಕಥೆಯಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS