ಚಂದ್ರನ ಮೇಲೆ ದೂರದರ್ಶಕ ಸ್ಥಾಪಿಸಲು ಮುಂದಾದ ಇಸ್ರೋ

ಈ ಸುದ್ದಿಯನ್ನು ಶೇರ್ ಮಾಡಿ

Isro

ನವದೆಹಲಿ, ಅ.17-ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಸಾಧನೆಗಳ ಮೈಲಿಗಲ್ಲುಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಮೇಲೆ ದೂರದರ್ಶಕ ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ರೂಪಿಸಿದೆ.  ಭಾರತದ ಪ್ರಥಮ ಪೂರ್ಣ ಸಮರ್ಪಣಾ ಬಾಹ್ಯಾಕಾಶ ವೀಕ್ಷಣಾ ಉಪಗ್ರಹ-ಆಸ್ಟ್ರೋಸ್ಯಾಟ್ ಯಶಸ್ಸಿನ ನಂತರ ಚಂದಿರನ ಮೇಲೆ ಟೆಲಿಸ್ಕೋಪ್ ಅಳವಡಿಸುವ ನವೀನ ಅನ್ವೇಷಣಾತ್ಮಕ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಸ್ರೋ ಕಾರ್ಯೋನ್ಮುಖವಾಗಲಿದೆ. ಐಐಟಿ ಮದ್ರಾಸ್‍ನಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ಉಪನ್ಯಾಸದ ಸಂದರ್ಭದಲ್ಲಿ ಇಸ್ರೋ ಮುಖ್ಯಸ್ಥ ಡಾ. ಎ.ಎಸ್. ಕಿರಣ್‍ಕುಮಾರ್ ಈ ಹೊಸ ಯೋಜನೆ ಬಗ್ಗೆ ಹೇಳಿದ್ದಾರೆ.

ಈ ಯೋಜನೆಯನ್ನು ಯಶಸ್ವಿಗೊಳಿಸಲು ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆ ಮಾತುಕತೆ ನಡೆಯುತ್ತಿದ್ದು, ಒಪ್ಪಂದ ಅಂತಿಮಗೊಂಡ ನಂತರ ಹೆಚ್ಚಿನ ವಿವರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಚಂದ್ರನ ಮೇಲೆ ದೂರದರ್ಶಕದ ಸಮರ್ಥ ಕಾರ್ಯನಿರ್ವಹಣೆ ಸಾಧ್ಯತೆಗಳ ಬಗ್ಗೆ ಇಸ್ರೋ ವಿಜ್ಞಾನಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ. ಈಗಾಗಲೇ ಅಮೆರಿಕದ ವೆಸ್ಟ್ ವರ್ಜಿನಿಯಾದ ಹ್ಯಾಂಡ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈಜ್ಞಾನಿಕ ವೀಕ್ಷಣಾ ಕೇಂದ್ರಕ್ಕಿಂತಲೂ ಹೆಚ್ಚಿನ ಸಾಮಥ್ರ್ಯ ಹೊಂದಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 29ರಂದು ಇತರ ಆರು ವಿದೇಶಿ ಉಪಗ್ರಹದೊಂದಿಗೆ ತನ್ನ ಚೊಚ್ಚಲ ಪ್ರಯತ್ನದಲ್ಲೇ ಭಾರತವು ಪೂರ್ಣ ಸಮರ್ಪಣಾ ಬಾಹ್ಯಾಕಾಶ ವೀಕ್ಷಣಾ ಉಪಗ್ರಹ-ಆಸ್ಟ್ರೋಸ್ಯಾಟ್‍ಅನ್ನು ಯಶಸ್ವಿ ಉಡಾವಣೆ ಮಾಡಿತ್ತು. ಇಸ್ರೋದ ಕಡಿಮೆ ವೆಚ್ಚದ 1.5 ಟನ್ ತೂಕದ ಉಪಗ್ರಹವನ್ನು ವಿಶ್ವಾಸಾರ್ಹ ಪಿಎಸ್‍ಎಲ್‍ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಸಿ-30 ಮೂಲಕ ನಭಕ್ಕೆ ಚಿಮ್ಮಿಸಿತ್ತು.

ಒಂದು ಯುವಿ ಟೆಲಿಸ್ಕೋಪ್‍ನೊಂದಿಗೆ ಆಸ್ಟ್ರೋಸ್ಯಾಟ್‍ನನ್ನು 650 ಕಿ.ಮೀ. ಕಕ್ಷೆಗೆ ಸೇರ್ಪಡೆ ಮಾಡಲಾಗಿತ್ತು. ಆ ದೂರದರ್ಶಕವು ಮಾನಿಟರ್ ಮತ್ತು ನಾಲ್ಕು ಎಕ್ಸ್-ರೇ ಪೇಲೋಡ್‍ಗಳನ್ನು ಹೊತ್ತೊಯ್ದಿತ್ತು. ಅಮೆರಿಕ, ರಷ್ಯಾ, ಮತ್ತು ಜಪಾನ್ ನಂತರ ಈ ಮಹತ್ವದ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದರ ಯಶಸ್ಸಿನ ಹಿಂದೆಯೇ ಈಗ ಚಂದ್ರನ ಮೇಲೆ ಟೆಲಿಸ್ಕೋಪ್ ಸ್ಥಾಪಿಸುವ ಇನ್ನೊಂದು ಮಹತ್ವದ ಯೋಜನೆಗೂ ಇಸ್ರೋ ಮುಂದಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin