ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಅರಳಿಮರ : ಅಪಾಯದಿದಂ ಪಾರಾದ ಅದೃಷ್ಟವಂತರು
ರಾಮನಗರ ,ಆ.20- ಗಾಂಧಿನಗರದ ಆಂಜನೇಯ ದೇವಸ್ಥಾನದ ಬಳಿ ರಸ್ತೆಯ ಪಕ್ಕದಲ್ಲಿದ್ದ ಭಾರೀ ಅರಳಿಮರ ಆಕಸ್ಮಿಕವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು , ಕಾರಿನಲ್ಲಿದ್ದ ಮೂವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮರಬಿದ್ದರೂ ಬದುಕುಳಿದ ಈ ಮೂವರು ತಮ್ಮ ಅದೃಷ್ಟಕ್ಕೆ ತಾವೇ ಸಂತಸಪಟ್ಟಿದ್ದಾರೆ. ‘ನಾವು ಬಲಗಡೆ ಎದ್ದಿದ್ವೀ ಅಂತ ಕಾಣ್ಸುತೆ. ದೇವರು ದೊಡ್ಡೋನು. ಇಲ್ಲ ಅಂದರೆ ದೊಡ್ಡ ಅನಾಹುತವೇ ಆಗುತಿತ್ತು. ಕಾರಿನ ಮೇಲೆ ಅರಳಿಮರ ಬಿದ್ದು ಸಂಪೂರ್ಣ ಜಖಂಗೊಂಡರೂ ನಾವು ಮಾತ್ರಬದುಕುಳಿದೇವು ಇದು ನಮ್ಮ ಅದೃಷ್ಟ ಎಂದಿದ್ದಾರೆ.
ಮೂವರು ತಮ್ಮ ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ಗಾಂಧಿನಗರದ ಬಳಿಯ ಆಂಜನೇಯ ದೇವಸ್ಥಾನದ ಬಳಿ ಇರುವ ಅರಳಿ ಮರ ಇದ್ದಕ್ಕಿದ್ದಂತೆ ಮುರಿದು ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಸುದ್ದಿ ತಿಳಿದು ರಾಮನಗರ ಟೌನ್ ಹಾಗೂ ಐಜೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಿನ ಮೇಲೆ ಮರ ಬಿದ್ದ ಹಿನ್ನಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಗಂಟೆಗಟ್ಟಲೇ ವಾಹನಗಳು ಸಾಲು ಗಟ್ಟಿ ನಿಂತಿದ್ದವು.
► Follow us on – Facebook / Twitter / Google+