ಚಳವಳಿಗಾರರಿಗೆ ಬೆದರಿಕೆ : ಸ್ತಬ್ಧಗೊಂಡ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

pandavapuraಪಾಂಡವಪುರ, ಸೆ.22- ಒಬ್ಬ ಸಾಮಾನ್ಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಕಾವೇರಿ ಹೋರಾಟದಲ್ಲಿ ನಿರತರಾಗಿದ್ದ ಚಳವಳಿಗಾರರಿಗೆ ಒಡ್ಡಿದ ಬೆದರಿಕೆಯಿಂದಾಗಿ ಪಾಂಡವಪುರ ತಾಲೂಕಿನಲ್ಲಿ ಕಾವೇರಿ ಹೋರಾಟ ಸಂಪೂರ್ಣ ಸ್ತಬ್ಧಗೊಂಡಿತು ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ದೂರಿದ್ದಾರೆ.ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯ ಸಂಭಾಗಣದಲ್ಲಿ ತಾಲೂಕು ಕಾವೇರಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿ.ಅಣ್ಣೇಗೌಡ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಚಳವಳಿ ಮುಂದುವರೆಸುವ ಸಂಬಂಧ ಚರ್ಚೆ ನಡೆಸಲು ಸೇರಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಸೆ.12ರಂದು ಯಾರೋ ಕೆಲವು ಪುಂಡ ಹುಡುಗರು ಪಟ್ಟಣದಲ್ಲಿ ನಡೆಸಿದ ಕಾವೇರಿ ಗಲಭೆಯನ್ನೇ ಬಂಡವಾಳವನ್ನಾಗಿಸಿಕೊಂಡ ಪಾಂಡವಪುರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅಯ್ಯನಗೌಡ ಎಲ್ಲರಿಗೂ ಕೇಸು ದಾಖಲಿಸುವುದಾಗಿ ಸುಖಾಸುಮ್ಮನೆ ಹೆದರಿಸಿ ಕಾವೇರಿ ಚಳವಳಿಯನ್ನು ಹತ್ತಿಕ್ಕಿದರು ಎಂದು ಸಭೆಯಲ್ಲಿ ನೇರ ಆರೋಪ ಮಾಡಿದರು.
ಚಳವಳಿ ಮುಂದುವರಿಕೆ:

ಪೊಲೀಸರ ವರ್ತನೆಯಿಂದ ಕಳೆದ 8 ದಿನಗಳಿಂದ ಸ್ಥಗಿತವಾಗಿದ್ದ ಕಾವೇರಿ ಚಳವಳಿಯನ್ನು ಮುಂದುವರೆಸಲು ತೀರ್ಮಾನಿಸಿ ಪಾಂಡವಪುರ ಪಟ್ಟಣದ ಐದು ದೀಪದ ವೃತ್ತದ ಬಳಿ ಶಾಮಿಯಾನ ಹಾಕಿಸಿ ಕಾವೇರಿ ಹೋರಾಟವನ್ನು ಶಾಂತರೀತಿಯಾಗಿ ಮುಂದುವರೆಸಿಕೊಂಡು ಹೋಗುವುದು ಎಂದು ಒಕ್ಕೊರಲಿನಿಂದ ಸಭೆಯಲ್ಲಿ ನಿರ್ಧರಿಸಲಾಯಿತು.ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಎಲ್.ನಂಜೇಗೌಡ, ಪಿಎಸ್‍ಎಸ್‍ಕೆ ಉಪಾಧ್ಯಕ್ಷ ಹಾರೋಹಳ್ಳಿ ನಂಜುಂಡೇಗೌಡ, ಜಿ.ಪಂ ಸದಸ್ಯ ಸಾಮಿಲ್ ತಿಮ್ಮೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಪಾಂಡವಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಸಿ.ಮಂಜುನಾಥ್, ಮೇಲುಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಮಂಜುನಾಥ್, ತಾ.ಪಂ ಸದಸ್ಯೆ ಮಂಗಳಾ ನವೀನ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin