ಚಳಿಗಾಲದ ಅಧಿವೇಶನ :ಕೇಂದ್ರದ ಮೇಲೆ ಸರ್ಜಿಕಲ್ ಸ್ಟ್ರೈಕ್‍ಗೆ ವಿಪಕ್ಷ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

winter-session
ನವದೆಹಲಿ, ನ.15-ಸಂಸತ್ತಿನ ಚಳಿಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ನೋಟು ಅಮಾನ್ಯ, ಏಕ ಶ್ರೇಣಿ ಪಿಂಚಣಿ ಸೇರಿದಂತೆ ಜ್ವಲಂತ ವಿಷಯಗಳನ್ನೇ ಬ್ರಹ್ಮಾಸ್ತ್ರವನ್ನಾಗಿಸಿ ಕೇಂದ್ರ ಸರ್ಕಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಇನ್ನೊಂದಡೆ ವಿರೋಧ ಪಕ್ಷಗಳ ಎಲ್ಲ ಆರೋಪಗಳಿಗೆ ಉತ್ತರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಆಡಳಿತ ಪಕ್ಷವೂ ಸಿದ್ದವಾಗಿದೆ.  ಬುಧವಾರದಿಂದ ಡಿಸೆಂಬರ್ 16ರವೆರೆಗೆ ಒಂದು ತಿಂಗಳ ಕಾಲ ನಡೆಯುವ ಸಂಸತ್ ಅಧಿವೇಶನದಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಎಲ್ಲ ಪಕ್ಷಗಳು ಒಗ್ಗೂಡಿವೆ. ಕಾಂಗ್ರೆಸ್ ಮುಖಂಡ ಗುಲಾಂನಬಿ ಆಜಾದ್ ನೇತೃತ್ವದಲ್ಲಿ ನಿನ್ನೆ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಸರ್ಕಾರದ ವಿರುದ್ಧ ಗದ್ದಲ ಎಬ್ಬಿಸಲು ತೀರ್ಮಾನಿಸಲಾಗಿದೆ. ತೃಣಮೂಲ ಕಾಂಗ್ರೆಸ್, ಭಾರತ ಕಮ್ಯೂನಿಷ್ಟ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಸಭೆಯಲ್ಲಿ ಭಾಗವಹಿಸಿ ಸರ್ಕಾರ ವಿರುದ್ಧ ವಾಕ್ಸಾರ ನಡೆಸಲು ಒಮ್ಮತದ ತೀರ್ಮಾನ ಕೈಗೊಂಡಿವೆ. ಟಿಎಂಸಿ ನಾಯಕಿ ಮತ್ತು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಹಳೆಯ ನೋಟು ನಿರ್ಧಾರವನ್ನು ವಿರೋಧಿಸುವಂತೆ ವಿರೋಧಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ಏಕ ಶ್ರೇಣಿ ಪಿಂಚಣಿ ಯೋಜನೆ, ಕಾಶ್ಮೀರ ಕಣಿವೆಯಲ್ಲಿ ಉಗ್ರರು ಮತ್ತು ಪಾಕಿಸ್ತಾನಿ ಸೈನಿಕರ ಉಪಟಳ, ದೇಶದ ವಿವಿಧೆಡೆ ಕೋಮು ಹಿಂಸಾಚಾರ, ಗೋರಕ್ಷಕರ ದೌರ್ಜನ್ಯ, ವಿವಾದಾತ್ಮಕ ಕಾನೂನುಗಳು ಮೊದಲಾದ ವಿಷಯಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ತುದಿಗಾಲಲ್ಲಿ ನಿಂತಿವೆ.
ಇದೇ ವೇಳೆ ಸುಗಮ ಕಲಾಪ ನಡೆಯುವಂತೆ ಪ್ರತಿಪಕ್ಷಗಳ ಮನವೊಲಿಸಲು ವಿಫಲವಾಗಿರುವ ಸರ್ಕಾರವು, ಅನ್ಯ ಮಾರ್ಗವಿಲ್ಲದೇ ಎಲ್ಲ ಆರೋಪಗಳು ಮತ್ತು ವಾಗ್ದಾಳಿಯನ್ನು ಸಮರ್ಥವಾಗಿ ಎದುರಿಸಲು ಕಾರ್ಯತಂತ್ರ ರೂಪಿಸಿದೆ.    9 ಮಸೂದೆಗಳಿಗೆ ಅಸ್ತು : ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಹಾಗೂ ಬಾಡಿಗೆ ತಾಯ್ತಾನ ನಿಬಂಧನೆಗ ಸೇರಿದ ಮಸೂದೆಗಳೂ ಸೇರಿದಂತೆ ಒಂಭತ್ತು ಹೊಸ ವಿಧೇಯಕಗಳು ಅನುಮೋದನೆಯಾಗುವ ನಿರೀಕ್ಷೆ ಇದೆ. ಅಲ್ಲದೆ, ರಸ್ತೆ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಕಡಿವಾಣ ಹಾಕಲು ಭಾರೀ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2016 ಸಹ ಅಂಗೀಕಾರವಾಗಲಿದೆ.   ಸಂಸತ್ತಿನ ಚಳಿಗಾಲದ ಅಧಿವೇಶನದ ಉಭಯ ಸದನಗಳಲ್ಲಿ ಕೇಂದ್ರೀಯ ಸರಕುಗಳು ಮತ್ತು ಸೇವೆಗಳ ತೆರಿಗೆ ಮಸೂದೆ, ಸಮಗ್ರ ಸರಕುಗಳು ಮತ್ತು ಸೇವೆಗಳ ತೆರಿಗೆ ಮಸೂದೆ, ಸರಕುಗಳು ಮತ್ತು ಸೇವೆಗಳ ತೆರಿಗೆ (ವರಮಾನ ನಷ್ಟಕ್ಕಾಗಿ ಪರಿಹಾರ) ಮಸೂದೆಗಳು ಮಂಡನೆಯಾಗಲಿದ್ದು, ಚರ್ಚೆ ಬಳಿಕ ಅವುಗಳಿಗೆ ಅನುಮೋದನೆ ಲಭಿಸಲಿದೆ.
ಬಾಡಿಗೆ ತಾಯ್ತಾನ (ನಿಬಂಧನೆ) ವಿಧೇಯಕವನ್ನು ಸಹ ಸದನದಲ್ಲಿ ಮಂಡಿಸಲಾಗುವುದು. ರಾಷ್ಟ್ರೀಯ ಬದಲಿ ತಾಯ್ತಾನ ಮಂಡಳಿ, ರಾಜ್ಯ ಬದಲಿ ತಾಯ್ತಾನ ಮಂಡಳಿಗಳ ರಚನೆ ಹಾಗೂ ಈ ವಿಧಾನ ಮತ್ತು ಪ್ರಕ್ರಿಯೆ ನಿಬಂಧನೆಗಾಗಿ ಸೂಕ್ತ ಅಧಿಕಾರಿಗಳ ನೇಮಕ ಮೊದಲಾದ ವಿಷಯಗಳ ನೀತಿ-ನಿಯಮ-ನಿಬಂಧನೆಗಳನ್ನು ಈ ಮಸೂದೆ ಒಳಗೊಂಡಿರುತ್ತದೆ.  ಇವುಗಳ ಜೊತೆ, ಮೋಟಾರು ವಾಹನ (ತಿದ್ದುಪಡಿ) ಮಸೂದೆ-2016 ಸಹ ಅಂಗೀಕಾರವಾಗಲಿದೆ. ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವಾಹನ ಚಾಲನೆ ಮಾಡುವವರು, ಪಾನಮತ್ತ ಚಾಲಕರು ಹಾಗೂ ಹಿಟ್ ಅಂಡ್ ರನ್ ಪ್ರಕರಣಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಈ ಮಸೂದೆಯಲ್ಲಿ ಉದ್ದೇಶಿಸಲಾಗಿದೆ. ತಪ್ಪತಸ್ಥರಿಗೆ ಈಗಿರುವ ದಂಡವನ್ನು 8 ರಿಂದ 10 ಪಟ್ಟು ಏರಿಸುವ ಜೊತೆ ಜೈಲು ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಲು ಮಸೂದೆಗೆ ತಿದ್ದುಪಡಿ ಮಾಡಲಾಗಿದೆ.   ಇದಲ್ಲದೆ, ಇಂಡಿಯನ್ ಇನ್ಸ್‍ಟಿಟ್ಯೂಟ್ಸ್ ಆಫ್ ಮ್ಯಾನೇಜ್‍ಮೆಂಟ್‍ಗಳಿಗೆ (ಐಐಎಂ) ಶಾಸನಬದ್ಧ ಸ್ಥಾನಮಾನಗಳನ್ನು ನೀಡುವ ಕುರಿತ ಐಐಎಂ ಮಸೂದೆ ಸೇರಿದಂತೆ ಇತರ ಆರು ಮಸೂದೆಗಳು ಸಹ ಚರ್ಚೆಗೆ ಮಂಡನೆಯಾಗಲಿದೆ.
ಎಚ್‍ಐವಿ/ಏಡ್ಸ್ ತಡೆ ಮತ್ತು ನಿಯಂತ್ರಣ ಮಸೂದೆ, ಮಾನಸಿಕ ಆರೋಗ್ಯ ಆರೈಕೆ ಮಸೂದೆ, ಹೆರಿಗೆ ಪ್ರಯೋಜನ ತಿದ್ದುಪಡಿ ಮಸೂದೆ, ಭಷ್ಟ್ರಾಚಾರ (ತಿದ್ದುಪಡಿ) ಮಸೂದೆ ಹಾಗೂ ಗ್ರಾಹಕರ ಸಂರಕ್ಷಣೆ ಮಸೂದೆಗಳನ್ನು ಸಹ ಅಂಗೀಕರಿಸುವ ನಿರೀಕ್ಷೆ ಇದೆ. ಕೆಲವು ಮಸೂದೆಗಳು ಈಗಾಗಲೇ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದ್ದು, ಲೋಕಸಭೆಯಲ್ಲೂ ಅಂಗೀಕಾರ ದೊರೆಯುವ ಸಾಧ್ಯತೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin