ಚಳಿಯಲ್ಲೂ ಬೆವರಿದ ಭ್ರಷ್ಟರು : 6 ಜಿಲ್ಲೆಗಳಲ್ಲಿ 7 ಅಧಿಕಾರಿಗಳ ನಿವಾಸ-ಕಚೇರಿಗಳ ಮೇಲೆ ಎಸಿಬಿ ದಿಢೀರ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ACB

ಬೆಂಗಳೂರು, ಡಿ.22- ದೇಶದಲ್ಲೇ ಹೆಸರು ಮಾಡಿದ್ದ ರಾಜ್ಯದ ಲೋಕಾಯುಕ್ತ ಸಂಸ್ಥೆ ನಿಷ್ಕ್ರಿಯವಾದ ಮೇಲೆ ಭ್ರಷ್ಟರನ್ನು ಹಿಡಿಯುವವರೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಎಸಿಬಿ ಸಕ್ರಿಯವಾಗಿದೆ. ಭ್ರಷ್ಟರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದರಿಂದ ಲಂಚಬಾಕರು ಡಿಸೆಂಬರ್‍ನ ಈ ಚಳಿಯಲ್ಲೂ ಬೆವರತೊಡಗಿದ್ದಾರೆ. ಭ್ರಷ್ಟರ ಬೆನ್ನು ಬಿದ್ದಿರುವ ಎಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಆರು ಜಿಲ್ಲೆಗಳ 7 ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣಗಳು ಹಾಗೂ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ವ್ಯಾಪಕ ಪರಿಶೀಲನೆ ನಡೆಸಿದ್ದಾರೆ. ಆಶ್ಚರ್ಯಕರ ಬೆಳವಣಿಗೆ ಎಂದರೆ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಎಸಿಬಿ ದಾಳಿಯ ಬಲೆಗೆ ಬಿದ್ದಿರುವುದು ವಿಶೇಷ.

ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಬೆಂಗಳೂರು, ಮಂಗಳೂರು, ಚಾಮರಾಜನಗರ ಜಿಲ್ಲೆಗಳ ವಿವಿಧೆಡೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು 7 ಭ್ರಷ್ಟರನ್ನು ಬಲೆಗೆ ಕೆಡವಿದ್ದಾರೆ.
ಚಾಮರಾಜನಗರ ಉಪ್ಪಾರಾಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ರೇಚಣ್ಣ ನಿವಾಸ ಹಾಗೂ ಅವರ ಸಂಬಂಧಿಕರ ಮನೆ ಸೇರಿದಂತೆ ಮೂರು ಕಡೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಭ್ರಮರಾಂಭ ಬಡಾವಣೆಯಲ್ಲಿರುವ ನಿವಾಸ, ಅಂಡ್ರಕಳ್ಳಿಯಲ್ಲಿರುವ ಮನೆ ಹಾಗೂ ಆಲೂರಿನಲ್ಲಿರುವ ಶಿಕ್ಷಕನ ಮಾವನ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ನಗರ ಯೋಜನೆ ಸಹಾಯಕನಿರ್ದೇಶಕ ಬಸವರಾಜ್, ಪುಟ್ಟೇನಹಳ್ಳಿ ವಾರ್ಡ್‍ನ ಕಂದಾಯ ವಸೂಲಿಗಾರ ಸಿ.ಎಸ್.ವಿನಯ್‍ಕುಮಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ಮುಂದುವರೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನ ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಪುಟ್ಟಲಿಂಗಯ್ಯ ಅವರ ಮನೆ ಹಾಗೂ ಕಚೇರಿಗಳ ಮೇಲೆ ಎರಡು ತಂಡಗಳಲ್ಲಿ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಮೊಳಕಾಲ್ಮೂರು ಕಚೇರಿ, ಚಿತ್ರದುರ್ಗದ ತರಳಬಾಳು ನಗರದ ಎರಡು ಮನೆಗಳು ಸೇರಿದಂತೆ ಇನ್ನೂ ಹಲವೆಡೆ ದಾಳಿ ನಡೆಸಿದ್ದು, ದಾಳಿ ವೇಳೆ ಚಿನ್ನಾಭರಣ, ಹಣ ದೊರೆತಿದ್ದು, ಎಸಿಬಿ ಡಿವೈಎಸ್‍ಪಿ ಮಂಜುನಾಥ್, ಸಿಪಿಐ ಉಮಾಪತಿ ಪರಿಶೀಲನೆ ಮುಂದುವರೆಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಪಂಪಾಪತಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಬೆಳಗ್ಗೆ 7 ಗಂಟೆಯಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಎಸ್ಪಿ ಅನಿತಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

ದಾವಣಗೆರೆಯ ಕೆಆರ್‍ಡಿಎಲ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ್ ಎನ್.ಪಾಟೀಲ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿರುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿರುವುದು ಕಂಡುಬಂದಿದೆ. ಮಂಗಳೂರು ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಗೋವಿಂದ ನಾಯಕ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin