ಚಳಿಯಲ್ಲೂ ಮೈನವಿರೇಳಿಸಿದ ಗುಡ್ಡಗಾಡು ಓಟ

ಈ ಸುದ್ದಿಯನ್ನು ಶೇರ್ ಮಾಡಿ

spordse

ಅರಸೀಕೆರೆ, ನ.28- ಮೈನಡುಗಿಸುವ ಚಳಿಯನ್ನು ಲೆಕ್ಕಿಸದೆ ನಾ ಮುಂದು-ತಾವು ಮುಂದು ಎಂದು ನಿಗದಿತ ಗುರಿಯತ್ತ ಓಟಗಾರರು ಮುನ್ನುಗುತ್ತಿದ್ದರೆ ಗ್ರಾಮೀಣ ಭಾಗದ ರಸ್ತೆಗಳುದ್ದಕ್ಕೂ ನಿಂತಿದ್ದ ಜನತೆ ಚಪ್ಪಾಳೆ-ಶಿಳ್ಳೆ ಹೊಡೆಯುವ ಮೂಲಕ ಓಟಗಾರರಿಗೆ ಹುರಿದುಂಬಿಸುತ್ತ ಪ್ರೋತ್ಸಾಹಿಸುತ್ತಾ ಗುಡ್ಡಗಾಡು ಓಟದ ಸ್ಪರ್ಧೆಯನ್ನು ರೋಚಕ ಕ್ಷಣಗಳಿಗೆ ಸಾಕ್ಷಿಯಾದರು.ಜಿಲ್ಲಾ ಅಥ್ಲೇಟಿಕ್ ಸಂಸ್ಥೆ ಮತ್ತು ಸ್ಥಳೀಯ ರೋಟರಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ತಾಲೂಕಿನ ಕ್ರೀಡಾಪಟುಗಳು ಸೇರಿದಂತೆ ಬೆಂಗಳೂರು, ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಬೆಳಗಾಂ, ಚಿಕ್ಕಬಳ್ಳಾಪುರ, ಮಂಡ್ಯ, ಚಿಕ್ಕಮಗಳೂರು, ಧಾರವಾಡ, ಗುಲ್ಬಾರ್ಗ ದಾವಣಗೆರೆ ಹೀಗೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಐನೂರಕ್ಕೂ ಹೆಚ್ಚಿನ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಕೂಟದ ಕಳೆಯನ್ನು ಹೆಚ್ಚುವಂತೆ ಮಾಡಿದರು.

ನಂತರ ನಗರದ ಪ್ರಸನ್ನ ಗಣಪತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ನಾವು ಸೇವಿಸುವ ಆಹಾರ ನಮ್ಮ ಆರೋಗ್ಯ ವೃದ್ಧಿಸುವ ಬದಲು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮೂಲಕ ನಾನಾ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡಿದೆ. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ನಮ್ಮ ದಿನಚರಿಯಲ್ಲಿ ಕನಿಷ್ಠ ಒಂದೆರಡು ಗಂಟೆಯಾದರು ಯೋಗ, ಆಟೋಟಗಳಲ್ಲಿ ಕಳೆದರೆ ಉತ್ತಮ ಆರೋಗ್ಯ ನಮ್ಮದಾಗಲಿದೆ ಎಂದರು.ರಿಯೋಪ್ಯಾರಾ ಒಲಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಥ್ಲೇಟಿಕ್ ತರಬೇತಿದಾರ ಹಾಗೂ ರಾಷ್ಟ್ರೀಯ ಹಿರಿಯ ಕ್ರೀಡಾಪಟು ಸತ್ಯನಾರಾಯಣ್ ಮಾತನಾಡಿ, ನಿರಂತರ ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆಯಲ್ಲದೆ ಉತ್ತಮ ಕ್ರೀಡಾಪಟುಗಳಾಗಿ ಸಾಧನೆ ಮಾಡಿದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹುದ್ದೆಗಳನ್ನು ಸಹ ಸುಲಭವಾಗಿ ಧಕ್ಕಿಸಿಕೊಳ್ಳಲು ಸಾಧ್ಯವಿದೆ ಎಂದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ , ರಾಜ್ಯ ಅಥ್ಲೇಟಿಕ್ ಸಂಸ್ಥೆಯ ಉಪಾಧ್ಯಕ್ಷ ಮುನಿಸಂಜೀವಪ್ಪ, ಕಾರ್ಯದರ್ಶಿ ಚಂದ್ರಶೇಖರ್‍ರೈ, ತಹಸೀಲ್ದಾರ್ ಎನ್.ವಿ.ನಟೇಶ್, ತಾಪಂ ಅಧ್ಯಕ್ಷೆ ಮಂಜುಳಾಬಾಯಿ, ರೋಟರಿ ಸಂಸ್ಥೆಯ ಅಧ್ಯಕ್ಷೆ ಕೆ.ವಿ.ನಿರ್ವಾಣ್‍ಸ್ವಾಮಿ ಮಾತನಾಡಿದರು. ವೇದಿಕೆಯಲ್ಲಿ ರಾಷ್ಟ್ರೀಯ ಕ್ರೀಡಾಪಟು ಎಚ್.ಟಿ.ಮಹದೇವ್, ಅನಂತ ಸದ್ವಿದ್ಯ ಸಂಸ್ಥೆಯ ಚೇರ್‍ಮ್ಯಾನ್ ಆರ್.ಅನಂತ್‍ಕುಮಾರ್, ಉದ್ಯಮಿ ಕೆ.ಪಿ.ವಿಶ್ವನಾಥ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕೆ.ಸಿ.ಯೋಗೀಶಚಾರ್, ಎನ್.ಜಿ.ಮಧು, ಕೆ.ಎಸ್.ಲೋಕೇಶ್, ಕಾರ್ಯದರ್ಶಿ ದಿವಾಕರ್, ಬಿಜೆಪಿ ಮುಖಂಡ ಕೆ.ವಿ.ಎನ್.ಶಿವು ಮತ್ತಿತರರು ಉಪಸ್ಥಿತರಿದ್ದರು.ಕ್ರೀಡಾಕೂಟದಲ್ಲಿ ವಿಜೇತರಿಗೆ ನಗದು ಬಹುಮಾನದ ಜತೆಗೆ ಆಕರ್ಷಕ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಪಾಲಾಯಿತು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin