ಚಾಂಪಿಯನ್ಸ್ ಟ್ರೋಫಿಯ ಗೆಲುವಿನ ಮೇಲೆ ನಿಂತಿದೆ ಅನಿಲ್ ಕುಂಬ್ಳೆ `ಕೋಚ್’ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Anil-kumble

ನವದೆಹಲಿ, ಜೂ.9- ಖ್ಯಾತ ಲೆಗ್‍ಸ್ಪಿನ್ನರ್ ಅನಿಲ್‍ಕುಂಬ್ಳೆ ಮುಖ್ಯ ತರಬೇತುದಾರರಾಗಿ ಮುಂದುವರೆಯಬೇಕೆ? ಅಥವಾ ಬೇರೆ ತರಬೇತುದಾರರನ್ನು ಆಯ್ಕೆ ಮಾಡಬೇಕೆ ಎಂಬುದು ಚಾಂಪಿಯನ್ಸ್ ಟ್ರೋಫಿಯ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.  ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು ಕ್ರಿಕೆಟ್ ಅಡ್ವೈಸರಿ ಕಮಿಟಿಯ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ , ವಿವಿಎಸ್ ಲಕ್ಷಣ್ ಅವರು ಅನಿಲ್‍ಕುಂಬ್ಳೆ ಅವರ ಸೇವಾವಧಿಯನ್ನು ಮುಂದುವರೆಸಲು ಒಲವು ತೋರಿದ್ದಾರೆ.ರವಿಶಾಸ್ತ್ರಿಯಿಂದ ತೆರವಾದ ಸ್ಥಾನಕ್ಕೆ ಅನಿಲ್‍ಕುಂಬ್ಳೆ ಆಯ್ಕೆಯಾದ ನಂತರ ಭಾರತ ತಂಡವು ಕ್ರಿಕೆಟ್ ರಂಗದಲ್ಲಿ ಉತ್ತುಂಗಕ್ಕೇರಿದ್ದೇ ಅಲ್ಲದೆ ಟೆಸ್ಟ್‍ನಲ್ಲಿ ನಂ.1 ತಂಡವಾಗಿ ರೂಪುಗೊಳ್ಳುವಲ್ಲಿ ಯಶಸ್ವಿಯಾಗಿತ್ತು.  ಅನಿಲ್‍ಕುಂಬ್ಳೆಯ 1 ವರ್ಷದ ತರಬೇತುದಾರರ ಹುದ್ದೆಯ ಕಾಲಮಿತಿ ಮುಗಿದ ನಂತರ ಬಿಸಿಸಿಐ ಆ ಹುದ್ದೆಗೆ ಅರ್ಜಿಯನ್ನು ಕರೆದಿದ್ದು ವೀರೇಂದ್ರ ಸೆಹ್ವಾಗ್, ಟಾಮ್‍ಮೂಡಿ, ಕನ್ನಡಿಗ ದೊಡ್ಡ ಗಣೇಶ್ ಅವರು ತರಬೇತುದಾರನ ಹುದ್ದೆಗೆ ಅರ್ಜಿ ಹಾಕಿದ್ದರು.ಈ ನಡುವೆ ಆಟಗಾರರು ಹಾಗೂ ತರಬೇತುದಾರನ ನಡುವೆ ವೈಮನಸ್ಯ ಉಂಟಾಗಿದ್ದು ತರಬೇತುದಾರನ ಬದಲಾವಣೆ ಶತಸಿದ್ಧ ಎಂದು ಅಂದಾಜಿಸಲಾಗಿತ್ತಾದರೂ ನಿನ್ನೆ ನಡೆದ ಸಿಎಸಿ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಪ್ರಕಾರ ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಸೆಮಿಫೈನಲ್, ಫೈನಲ್ ಪ್ರವೇಶಿಸಿದರೆ, ಪ್ರಶಸ್ತಿಯನ್ನು ಗೆದ್ದುಕೊಂಡರೆ ಮುಂಬರುವ ಸೀಮಿತ ಓವರ್‍ಗಳ ವಿಶ್ವಕಪ್‍ನವರೆಗೂ ಕುಂಬ್ಳೆ ಅವರನ್ನೇ ತರಬೇತುದಾರನ ಹುದ್ದೆಯಲ್ಲಿ ಮುಂದುವರೆಸುವುದಾಗಿ ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಕುರಿತು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಅಭಿಪ್ರಾಯವನ್ನು ಪಡೆಯುವುದಾಗಿ ಖನ್ನಾ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin