ಚಾಮರಾಜಪೇಟೆಯಲ್ಲಿ ಗೌಡರ ವಿರೋಧದ ನಡುವೆಯೂ ಜಯಗಳಿಸುವರೇ ಜಮೀರ್..!?

ಈ ಸುದ್ದಿಯನ್ನು ಶೇರ್ ಮಾಡಿ

Chamarajpet--01

– ರಮೇಶ್ ಪಾಳ್ಯ
ಬೆಂಗಳೂರು, ಫೆ.6- ಜೆಡಿಎಸ್‍ನಿಂದ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ವೀರ ಎನಿಸಿಕೊಂಡಿರುವ ಶಾಸಕ ಜಮೀರ್ ಅಹಮ್ಮದ್ ಖಾನ್ ಈ ಬಾರಿ ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕಿಳಿಯುವ ಸಾಧ್ಯತೆ ಇರುವುದರಿಂದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಈ ಬಾರಿ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ.  ಎಸ್.ಎಂ.ಕೃಷ್ಣ ಅವರ ರಾಜೀನಾಮೆಯಿಂದ ತೆರವಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 2005ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಜಮೀರ್ ಅಹಮ್ಮದ್ ಅವರು ಇದುವರೆಗೂ ಸೋಲು ಕಂಡಿಲ್ಲ. ಆದರೆ, ಈ ಬಾರಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ದೊರೆಯುವ ಸಾಧ್ಯತೆಗಳಿವೆ. ಒಂದು ವೇಳೆ ಕೈ ಟಿಕೆಟ್ ತಪ್ಪಿದರೂ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಅವರ ಕೆಂಗಣ್ಣಿಗೆ ಗುರಿಯಾಗಿರುವ ಜಮೀರ್ ಅವರ ಗೆಲುವು ಈ ಬಾರಿ ಅಷ್ಟು ಸುಲಭವಲ್ಲ ಎನ್ನಲಾಗಿದೆ. ಜಮೀರ್ ಅವರ ಗೆಲುವಿಗೆ ಬ್ರೇಕ್ ಹಾಕಲು ಶಪಥ ತೊಟ್ಟಿರುವ ದೇವೇಗೌಡರು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಗಾದೆ ಮಾತಿನಂತೆ ತಮ್ಮ ಪರಮಾಪ್ತ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಆರೀಫ್ ಪಾಷ ಅವರ ಪುತ್ರ ಹಾಗೂ ಜಮೀರ್ ಅಹಮ್ಮದ್ ಖಾನ್ ಅವರ ಬಲಗೈ ಬಂಟರಂತಿದ್ದ ಪಾದರಾಯನಪುರ ವಾರ್ಡ್ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕೃಪಾಕಟಾಕ್ಷವಿದೆ. ಸೋನಿಯಾ ಮತ್ತು ರಾಹುಲ್‍ಗಾಂಧಿ ಅವರ ನಿಕಟ ಸಂಪರ್ಕದಲ್ಲಿರುವ ಬಾವಾ ಅವರು ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನನಗೆ ದೊರೆಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಬಾವಾ ಅವರಿಗೆ ಟಿಕೆಟ್ ಕೈ ತಪ್ಪಿದರೆ ಅವರು ಜೆಡಿಎಸ್ ಇಲ್ಲವೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವ ಸಾಧ್ಯತೆಗಳಿವೆ. ಜಮೀರ್ ಅವರ ಭದ್ರಕೋಟೆಯಂತಿದ್ದ ಚಾಮರಾಜಪೇಟೆಯಲ್ಲಿ ಜೆಡಿಎಸ್ ಒಳಜಗಳ ಮತ್ತು ಕಾಂಗ್ರೆಸ್ ಟಿಕೆಟ್ ಕಿತ್ತಾಟದ ಲಾಭ ಗಳಿಸಿಕೊಂಡು ಈ ಬಾರಿ ಪೇಟೆಯಲ್ಲಿ ಕೇಸರಿ ಬಾವುಟ ಹಾರಿಸಲು ಬಿಜೆಪಿ ತಂತ್ರ ಹೆಣೆಯುತ್ತಿದೆ.  ಪುನರ್‍ವಿಂಗಡನೆಗೂ ಮುನ್ನ ಬಿಜೆಪಿಯ ಪ್ರಮೀಳಾ ನೇಸರ್ಗಿ ಅವರು ಶಾಸಕರಾಗಿದ್ದರು. ಆನಂತರ ಕಾಂಗ್ರೆಸ್‍ನ ಆರ್.ವಿ.ದೇವರಾಜ್ ಶಾಸಕರಾಗಿ ಆರಿಸಿಬಂದಿದ್ದರು. ಎಸ್.ಎಂ.ಕೃಷ್ಣ ಅವರಿಗಾಗಿ ಆರ್.ವಿ.ದೇವರಾಜ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ದೇವರಾಜ್ ಅವರ ರಾಜೀನಾಮೆಯಿಂದ ತೆರವಾದ ಚಾಮರಾಜಪೇಟೆಯಲ್ಲಿ ಎಸ್‍ಎಂಕೆ ಶಾಸಕರಾಗಿ ಆಯ್ಕೆಯಾಗಿದ್ದರು.

ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕಗೊಂಡ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ 2005ರಲ್ಲಿ ನಡೆದ ಉಪಚುನಾವಣೆಯಲ್ಲಿ ಜಮೀರ್ ಅಹಮ್ಮದ್‍ಖಾನ್ ಅವರು ಜೆಡಿಎಸ್‍ನಿಂದ ಗೆಲುವು ಸಾಧಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆ ನಂತರ ಆರ್.ವಿ.ದೇವರಾಜ್ ಚಿಕ್ಕಪೇಟೆಯತ್ತ ಮುಖ ಮಾಡಿದರೆ ಚಾಮರಾಜಪೇಟೆಯಲ್ಲಿ ಜಮೀರ್ ಅಹಮ್ಮದ್ ಖಾನ್ ಜೆಡಿಎಸ್ ಬ್ಯಾನರ್‍ನಡಿ ಹ್ಯಾಟ್ರಿಕ್ ಗೆಲುವು ಸಾಧಿಸಿಕೊಂಡು ಬರುತ್ತಿದ್ದಾರೆ.  ದಲಿತರು, ಬ್ರಾಹ್ಮಣರು, ಒಕ್ಕಲಿಗರು ಮತ್ತು ಅಲ್ಪಸಂಖ್ಯಾತರೇ ಹೆಚ್ಚಿರುವ ಚಾಮರಾಜಪೇಟೆಯಲ್ಲಿ ಹಿಂದೂ ಮತಗಳನ್ನು ಒಗ್ಗೂಡಿಸುವ ಮೂಲಕ ಗೆಲುವು ಸಾಧಿಸಲು ರಣತಂತ್ರ ರೂಪಿಸಿರುವ ಬಿಜೆಪಿ ಈ ಬಾರಿ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.

ಕಳೆದ ಬಾರಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ವಿ.ಗಣೇಶ್ ಹಾಗೂ ಲಹರಿವೇಲು ಅವರು ಈ ಬಾರಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ, ವಿಜಯನಗರದಲ್ಲಿ ಬಿಜೆಪಿ ಟಿಕೆಟ್ ನೀಡುವಂತೆ ಕಳೆದ ಹಲವಾರು ವರ್ಷಗಳಿಂದ ವಿ.ಸೋಮಣ್ಣ ಅವರ ಮೇಲೆ ನಿರಂತರ ಒತ್ತಡ ತರುತ್ತಿರುವ ಬಿಬಿಎಂಪಿ ಮಾಜಿ ಉಪಮಹಾಪೌರ ಎಂ.ಲಕ್ಷ್ಮಿನಾರಾಯಣ್ ಅವರಿಗೆ ಈ ಬಾರಿ ಚಾಮರಾಜಪೇಟೆಯಲ್ಲಿ ಬಿಜೆಪಿ ಟಿಕೆಟ್ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ.  ಸೋಮಣ್ಣ ಅವರ ಪ್ರಭಾವ ಹಾಗೂ ಪರೋಕ್ಷವಾಗಿ ದೇವೇಗೌಡರ ಆಶೀರ್ವಾದ ಇರುವ ಲಕ್ಷ್ಮಿನಾರಾಯಣ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಜಮೀರ್ ಅಹಮ್ಮದ್ ಖಾನ್ ಅವರ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಬಹುದು ಎಂಬುದು ಕೇಸರಿ ಪಾಳಯದ ಆಲೋಚನೆಯಾಗಿದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಚತುಷ್ಕೋನ ಪೈಪೋಟಿ ಏರ್ಪಡಲಿದೆ. ಈ ಬಾರಿಯೂ ಜಮೀರ್ ಅವರು ಗೆಲುವು ಸಾಧಿಸುವರೇ, ಜೆಡಿಎಸ್‍ನ ಇಮ್ರಾನ್ ಖಾನ್ ಅವರು ಗುರುವಿಗೆ ಮಣ್ಣು ಮುಕ್ಕಿಸುವರೇ ಅಥವಾ ಗುರು-ಶಿಷ್ಯರ ನಡುವಿನ ಕದನದಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಿನಾರಾಯಣ್ ವಿಧಾನಸೌಧದ ಮೆಟ್ಟಿಲೇರುವರೇ ಕಾದು ನೋಡಬೇಕಿದೆ.

Facebook Comments

Sri Raghav

Admin