ಚಾರ್ಜ್ ಶೀಟ್ ರದ್ದು ಕೋರಿ ಮಾಜಿ ಲೋಕಾಯುಕ್ತ ಭಾಸ್ಕರ್‍ರಾವ್ ಹೈಕೋರ್ಟ್’ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Bhaskar-Roa

ಬೆಂಗಳೂರು, ನ.22- ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯನ್ನಾಗಿಸಿ ವಿಶೇಷ ತನಿಖಾ ತಂಡ (ಎಸ್‍ಐಟಿ) ಸಲ್ಲಿಸಿರುವ ಹೆಚ್ಚುವರಿ ದೋಷಾರೋಪಣ ಪಟ್ಟಿ ರದ್ದುಗೊಳಿಸುವಂತೆ ಕೋರಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‍ರಾವ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಭಾಸ್ಕರ್‍ರಾವ್ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ನ್ಯಾಯಮೂರ್ತಿ ಭಾಸ್ಕರ್‍ರಾವ್ ಅವರನ್ನು ಏಳನೆ ಆರೋಪಿಯನ್ನಾಗಿಸಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಭಾಸ್ಕರ್‍ರಾವ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಎಸ್‍ಐಟಿ ಸಲ್ಲಿಸಿರುವ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಭಾಸ್ಕರ್‍ರಾವ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿಯವರ ಏಕಸದಸ್ಯ ಪೀಠ ಭಾಸ್ಕರ್‍ರಾವ್ ಅವರ ಮನವಿಯನ್ನು ತಿರಸ್ಕರಿಸಿದೆ. ಹೀಗಾಗಿ ನ್ಯಾಯಮೂರ್ತಿ ಭಾಸ್ಕರ್‍ರಾವ್ ಅವರಿಗೆ ಹೊಸ ಕಂಟಕ ಎದುರಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ಅಲ್ಲದೆ, ಬಂಧನದ ಭೀತಿಯೂ ಎದುರಾಗಿದೆ. ತಮ್ಮ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಕಾನೂನು ಬಾಹಿರವಾಗಿದೆ. ಹಾಗಾಗಿ ವಿಚಾರಣೆ ರದ್ದುಪಡಿಸಬೇಕು. ಜತೆಗೆ ಅಧೀನ ನ್ಯಾಯಾಲಯದ ಸಮನ್ಸ್‍ಗೆ ತಡೆ ನೀಡಬೇಕೆಂದು ಮಧ್ಯಂತರ ಮನವಿ ಮಾಡಿದ್ದರು.

ಸಮನ್ಸ್‍ಗೆ ತಡೆ ನೀಡಲು ನಿರಾಕರಿಸಿದ್ದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿಯವರು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿ ಕಾಯ್ದಿರಿಸಿದ ತೀರ್ಪನ್ನು ಇಂದು ಪ್ರಕಟಿಸಿ ಭಾಸ್ಕರ್‍ರಾವ್ ಅವರ ಅರ್ಜಿಯನ್ನು ವಜಾಗೊಳಿಸಿದರು. ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್‍ರಾವ್ ಲೋಕಾಯುಕ್ತ ಕಚೇರಿಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಭ್ರಷ್ಟಾಚಾರವೆಸಗಿದ್ದಾರೆ. ಇವರ ಈ ಕೃತ್ಯಕ್ಕೆ ಭಾಸ್ಕರ್‍ರಾವ್ ಅವರು ಪರೋಕ್ಷವಾಗಿ ಸಹಕರಿಸಿದ್ದಾರೆ. ಅಲ್ಲದೆ, ಸಾಕ್ಷ್ಯ ನಾಶಕ್ಕೂ ಪ್ರಯತ್ನಿಸಿದ್ದಾರೆ ಎಂದು ಲೋಕಾಯುಕ್ತ ಕೋರ್ಟ್‍ಗೆ ಎಸ್‍ಐಟಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಇದನ್ನು ರದ್ದು ಮಾಡುವಂತೆ ಭಾಸ್ಕರ್‍ರಾವ್ ಅವರು ಕೋರಿದ್ದರು. ಆದರೆ, ಅವರ ಮನವಿಯನ್ನು ಹೈಕೋರ್ಟ್ ಪರಿಗಣಿಸಿಲ್ಲ. ಈಗ ಭಾಸ್ಕರ್‍ರಾವ್ ಅವರು ಹೈಕೋರ್ಟ್‍ಗೆ ಮತ್ತೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬಹುದು. ಇಲ್ಲವೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.  ಭ್ರಷ್ಟಾಚಾರ ನಿಯಂತ್ರಿಸಲು ರಚನೆಯಾದ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಲೋಕಾಯುಕ್ತರ ಪುತ್ರನೊಬ್ಬ ಅಧಿಕಾರಿಗಳನ್ನು ಬಳಸಿಕೊಂಡು ನಡೆಸಿದ ಭಾರೀ ಭ್ರಷ್ಟಾಚಾರ, ಅಲ್ಲದೆ ಲೋಕಾಯುಕ್ತ ಸಂಸ್ಥೆಯಲ್ಲಿನ ಅಧಿಕಾರಿಗಳೇ ಮಾಡಿದ ವ್ಯಾಪಕ ಭ್ರಷ್ಟಾಚಾರ ದೇಶಾದ್ಯಂತ ಸುದ್ದಿ ಮಾಡಿತ್ತು.ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ಭಾಸ್ಕರ್‍ರಾವ್ ಅವರು ಇದಕ್ಕೆ ಸಹಕಾರ ನೀಡಿದ್ದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಉಭಯ ಸದನಗಳಲ್ಲಿ ನಿರ್ಣಯ ಕೈಗೊಂಡು ಅವರನ್ನು ಲೋಕಾಯುಕ್ತ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin