ಚಿಕ್ಕಬಳ್ಳಾಪುರದಲ್ಲಿ ಜಾಗ್ವಾರ್ ಸಂಚಾರ, ಜೆಡಿಎಸ್ ಅಭ್ಯರ್ಥಿಗಳ ಪರ ನಿಖಿಲ್ ಭರ್ಜರಿ ಪ್ರಚಾರ
ಚಿಕ್ಕಬಳ್ಳಾಪುರ. ಏ.20 : ನಟ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರು ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ರೈತರ ಸಾಲಮನ್ನಾ ಉದ್ದೇಶಕ್ಕಾಗಿ ಈ ಬಾರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬೆಂಬಲಿಸುವಂತೆ ಕೋರಿದರು. ಜೆಡಿಎಸ್ ಪರ ಪ್ರಚಾರಕ್ಕೆ ಧುಮುಕಿದ್ದ ನಿಖಿಲ್ ಕುಮಾರ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪಕ್ಷದ ಮುಖಂಡರು ಸಾಥ್ ನೀಡಿದರು. ಪ್ರಚಾರದ ವೇಳೆ ಹಿರಿಯ ನಾಗರಿಕರಿಂದ ಆಶಿರ್ವಾದ ಪಡೆದರು, ಮಕ್ಕಳೊಂದಿಗೆ ಬೆರೆತರು, ಹಾಲುಗಲ್ಲದ ಹಸಗೂಸುಗಳನ್ನು ಎತ್ತಿ ಮುದ್ದಿಸಿದರು. ದೀನ, ದುರ್ಬಲರ ಮನೆಗಳಿಗೆ ಭೇಟಿ ನೀಡಿದರು. ರೋಗಿಗಳಿಗೆ ಧೈರ್ಯ ತುಂಬಿದರು. ಮುಂದಿನ ಎಚ್ಡಿಕೆ ಸರ್ಕಾರ ರೈತ, ಬಡವ ಬಲ್ಲಿದರಾದ್ದಾಗಲಿದೆ ಎಂದು ಹೇಳುವ ಮೂಲಕ ಭರವಸೆ ಮೂಡಿಸಿದರು.
ನಂತರ ಜಿಲ್ಲೆ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದ ನಿಖಿಲ್, ಚುನಾವಣೆಯ ತಯಾರಿ, ರೂಪಿಸಬೇಕಾದ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಮುಖಂಡರಿಗೆ ಕೆಲ ಸಲಹೆ ಸೂಚನೆಗಳನ್ನೂ ನೀಡಿದರು. ಈ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ, ಕುಮಾರಸ್ವಾಮಿ ಅವರು ಇಷ್ಟ ಆಗುವುದು ಅವರ ಸರಳತೆ ಕಾರಣಕ್ಕೆ. ಯಾರೇ ಹೋದರು ಅವರನ್ನು ನೇರವಾಗಿ ಭೇಟಿ ಮಾಡುವ ಅವಕಾಶವನ್ನು ಎಚ್ಡಿಕೆ ಕಲ್ಪಿಸಿದ್ದಾರೆ. ನಿಖಿಲ್ ಕುಮಾರ್ ಇಂದು ನಮ್ಮೊಂದಿಗೆ ಕಲೆಯುವ ಮೂಲಕ ತಂದೆಗೆ ತಕ್ಕ ಮಗ ಎಂದು ನಿರೂಪಿಸಿದ್ದಾರೆ . ಇಂತಹ ವಿಚಾರಗಳಲ್ಲಿ ಮಕ್ಕಳಿಗೆ ತಂದೆ ತಾಯಿಯೇ ಪ್ರೇರಣೆ ಎಂದು ಅಭಿಪ್ರಾಯಪಟ್ಟರು. ಇಂದು ಬೆಳಗ್ಗೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿರುವ ನಿಖಿಲ್ ಕುಮಾರ್ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಕೊರಟಗೆರೆ, ಶಿರಾದಲ್ಲಿ ಪ್ರಚಾರ ನಡೆಸಲಿದ್ದಾರೆ.