ಚಿಕ್ಕಮಗಳೂರು ಮತ್ತೆ ಕಾಂಗ್ರೆಸ್ ತೆಕ್ಕೆಗೆ  : ಜೈರಾಂ ರಮೇಶ್ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

JaiRam-Ramesh

ಚಿಕ್ಕಮಗಳೂರು,ಆ.24-ಒಂದು ಕಾಲಕ್ಕೆ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಈಗ ಬಿಜೆಪಿಯವರ ಕೈವಶವಾಗಿದ್ದು, ಅದನ್ನು ಪುನಃ ಕಾಂಗ್ರೆಸ್ ತೆಕ್ಕೆಗೆ ತರಲು ಹೈಕಮಾಂಡ್ ನನಗೆ ಜವಾಬ್ದಾರಿ ನೀಡಿದೆ ಎಂದು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ತಿಳಿಸಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1978ರಲ್ಲಿ ಕಾಂಗ್ರೆಸ್ ಮತ್ತು ಇಂದಿರಾಗಾಂಧಿ ಅವರಿಗೆ ಚಿಕ್ಕಮಗಳೂರು ಪುರ್ನಜನ್ಮ ನೀಡಿತ್ತು. ಅದನ್ನು ಕಾಂಗ್ರೆಸ್ ಎಂದಿಗೂ ಮರೆಯುವುದಿಲ್ಲ ಎಂದರು.  ಈ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದು, ಈ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ಹಾಗಾಗಿ ಪ್ರತಿ ವರ್ಷ 5 ಕೋಟಿ ರೂ.ಗಳಂತೆ ಸಂಸದರ ನಿಧಿಯಿಂದ 6 ವರ್ಷದಲ್ಲಿ 30 ಕೋಟಿ ಅನುದಾನವನ್ನು ಜಿಲ್ಲೆಗೆ ವಿನಿಯೋಗಿಸಲು ಆಯ್ಕೆ ಮಾಡಿಕೊಂಡಿದ್ದು, ಸಂಸದರ ನಿಧಿ ಸದ್ಬಳಕ್ಕೆ ಆಗಬೇಕು. ಮೂರು ತಿಂಗಳೊಳಗೆ ಕಾಮಗಾರಿಗಳು ಸಿದ್ದಪಡಿಸಿ ಅನುದಾನ ಒದಗಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ, ಕಾಂಗೆಸ್ ಮತ್ತು ಜೆಡಿಎಸ್ ನಡುವೆ ಸ್ಪರ್ಧೆ ಇರಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್-ಕಾಂಗ್ರೆಸ್ ಮಧ್ಯೆಯೇ ಸ್ಪರ್ಧೆ ಇರಬಾರದು ಂದು ಅವರು ಹೇಳಿದರು.  ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರನ್ನು ಗೆಲ್ಲಿಸುವುದೇ ನಮ್ಮ ಜವಾಬ್ದಾರಿ. 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ನಿಟ್ಟಿನಲ್ಲಿ ಬ್ಲಾಕ್ ಮಟ್ಟದಿಂದ ಸಂಘಟನೆ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಾನು ಎಲ್ಲಾ ತಾಲ್ಲೂಕಿನಲ್ಲೂ ಒಂದು ಹಂತದ ಪ್ರವಾಸ ಮುಗಿಸಿದ್ದೇನೆ. ಸಾರ್ವಜನಿಕ ಬೆಂಬಲ ನಮ್ಮ ಪಕ್ಷದ ಪರವಾಗಿದೆ ಎಂದು ಹೇಳಿದರು.  ಕೇಂದ್ರ ಸರ್ಕಾರದ ಜನ ವಿರೋಧಿ ಧೋರಣೆ, ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಿ ಮುಂದಿನ ದಿನಗಳಲ್ಲಿ ಮತಗಳಾಗಿ ಪರಿವರ್ತನೆ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಜೈರಾಂ ರಮೇಶ್ ತಿಳಿಸಿದರು.

ಕಾಂಗ್ರೆಸ್ನಿಂದ ಹೊರಗಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಅವರನ್ನು ಪುನಃ ಕಾಂಗ್ರೆಸ್ಗೆ ಕರೆತರಲು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹ ತೋರಿದ್ದಾರೆ. ಈ ವಿಚಾರವನ್ನು ಗಮನಕ್ಕೆ ತಂದಿದ್ದು ನಾವು ಸೋನಿಯಾಗಾಂಧಿ, ರಾಹುಲ್ ಗಾಂಧಿ ಜೊತೆ ಮಾತನಾಡಿ, ಜಯಪ್ರಕಾಶ್ ಹೆಗಡೆ ಅವರನ್ನು ಮಾತೃ ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.  ಕಾಫಿ, ಟೀ, ಅಡಿಕೆ, ರಬ್ಬರ್ ಸೇರಿದಂತೆ ತೋಟದ ಬೆಳೆಗಳ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆ ಕಾಣಿಸುತ್ತಿಲ್ಲ. ಈ ಬಗ್ಗೆ ತಾವು ನವೆಂಬರ್ನಲ್ಲಿ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದೇನೆ ಎಂದರು.   ಗೋಷ್ಠಿಯಲ್ಲಿ ಜಿ.ಕಾಂಗ್ರೆಸ್ ಅಧ್ಯಕ್ಷ  ಡಾ.ಬಿ.ಎಲ್.ವಿಜಯಕುಮಾರ್, ಮುಖಂಡರಾದ ಟಿ.ಡಿ.ರಾಜೇಗೌಡ, ಸಚಿನ್ ನಿಗಾ, ಶ್ರೀಧರ್ ಉರಾಳ್ ನಿಸಾರ್ ಅಹ್ಮದ್, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin