ಚಿಕ್ಕಮಗಳೂರು : ಶಾಲಾ ವಾಹನ ಪಲ್ಟಿಯಾಗಿ ವಿದ್ಯಾರ್ಥಿಗಳಿಬ್ಬರ ಸಾವು
ಚಿಕ್ಕಮಗಳೂರು,ಆ.5- ಖಾಸಗಿ ಶಾಲಾ ವಾಹನ ಮಗುಚಿಬಿದ್ದು ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಶಾಲೆಗೆ ಎರಡು ದಿನಗಳ ರಜೆ ಘೋಷಣೆ ಮಾಡಿದ್ದಾರೆ. ಅಜ್ಜಂಪುರ ಸಂದೀಪಿನಿ ಶಾಲೆಯ ವಿದ್ಯಾರ್ಥಿಗಳಾದ ಪ್ರೀತಮ್(6), ಛಾಯಾ(6) ಮೃತಪಟ್ಟ ವಿದ್ಯಾರ್ಥಿಗಳು. ನಿನ್ನೆ ಸಂಜೆ ಎಂದಿನಂತೆ ಸಂದೀಪಿನಿ ಶಾಲೆಯ ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆದೊಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕುಂದಾಪುರ ಬಳಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ. ಸಂದೀಪಿನಿ ಶಾಲೆಯ ಖಾಸಗಿ ಬಸ್ ಸುಸ್ಥಿತಿಯಲ್ಲಿಲ್ಲ. ಅಲ್ಲದೆ ಇತ್ತೀಚೆಗೆ ನಿರ್ಮಾಣವಾದ ರಸ್ತೆಯ ಬದಿ ನುಣುಪಾದ ಮಣ್ಣಿನಿಂದಾಗಿ ಈ ದುರ್ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಗೊಂಡಿದ್ದವರನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲ ವಿದ್ಯಾರ್ಥಿಗಳನ್ನು ತರಿಕೆರೆ ಮತ್ತು ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಈ ಸಂದರ್ಭದಲ್ಲಿ ಗಾಯಗೊಂಡ ಮಕ್ಕಳು ಮತ್ತು ಅವರ ಪೋಷಕರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ವಿವರ ಪಡೆದು ಅವರಿಗೆ ಧೈರ್ಯ ಹೇಳಿದರು. ಜಿಲ್ಲಾಧಿಕಾರಿಯೊಂದಿಗೆ ತರೀಕೆರೆ ಶಾಸಕ ಜೆ.ಎಚ್.ಶ್ರೀನಿವಾಸ್, ಜಿಲ್ಲಾ ಡಿಡಿಪಿಐ ಎಸ್.ಜಿ.ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್, ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಎರಡು ದಿನ ಶಾಲೆಗೆ ರಜೆ ಘೋಷಣೆ ಮಾಡಿದರು.
► Follow us on – Facebook / Twitter / Google+
► ಡೌನ್ಲೋಡ್ ‘ಈ ಸಂಜೆ’ ಮೊಬೈಲ್ ಆಪ್