ಚಿಕ್ಕರಾಯಪ್ಪ-ಜಯಚಂದ್ರ ಸಂಬಂಧಿಗಳ ನಿವಾಸ ಸೇರಿ ರಾಜ್ಯದ 11 ಕಡೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Chikkarayappa-Jayachandra-B

ಬೆಂಗಳೂರು, ಡಿ.8– ಕಪ್ಪು ಹಣ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆ ಎದುರಿಸುತ್ತಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ಹೆದ್ದಾರಿ ಯೋಜನಾ ಪ್ರಾಧಿಕಾರದ  ಅಧಿಕಾರಿ ಜಯಚಂದ್ರ ಅವರ ಸಂಬಂಧಿಕರ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಕಳೆದ ನ.30ರಂದು ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಈ ಇಬ್ಬರು ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿದಾಗ 152 ಕೋಟಿ ರೂ.ಗಳಷ್ಟು ಅಕ್ರಮ ಆಸ್ತಿ ಪತ್ತೆಯಾಗಿತ್ತು. 2000 ಮುಖಬೆಲೆಯ 5.7 ಕೋಟಿ ಹೊಸ ನೋಟುಗಳು ಪತ್ತೆಯಾಗಿದ್ದವು. ತನಿಖೆ ವೇಳೆ ಇಬ್ಬರು ಗುತ್ತಿಗೆದಾರರನ್ನು ಬಂಧಿಸಲಾಗಿತ್ತು. ನಂತರ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ತನಿಖೆ ನಡೆಸಿದ್ದರು. ಎಸಿಬಿ ಅಧಿಕಾರಿಗಳು ಕೂಡ ದೂರು ದಾಖಲಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ನಗರ ಹಾಗೂ ವಿವಿಧ 11 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳು, ನಗ-ನಾಣ್ಯ ವಶಪಡಿಸಿಕೊಂಡಿದ್ದಾರೆ ಮತ್ತು ಈಗಾಗಲೇ ಪತ್ತೆಯಾಗಿರುವ ಆಸ್ತಿ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.  ಇಂದು ಬೆಳ್ಳಂಬೆಳಗ್ಗೆ 5 ಗಂಟೆ ವೇಳೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ. ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರ ನಿವಾಸ, ಕಚೇರಿಗಳು ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಅಲ್ಲಿಂದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಕೋಲಾರ ಜಿಲ್ಲೆ ಕೆಜಿಎಫ್ ವಿವೇಕನಗರದಲ್ಲಿರುವ ಚಿಕ್ಕರಾಯಪ್ಪನ ನಾದಿನಿಯ ಗಂಡ ಆನಂದಮೂರ್ತಿ ಅವರ ನಿವಾಸದ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ಇನ್ಸ್‍ಪೆಕ್ಟರ್ ದೇವೇಂದ್ರಪ್ಪ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಮಹತ್ವದ ದಾಖಲೆಗಳು, ಆಸ್ತಿ ನೋಂದಣಿ ದಾಖಲೆಗಳು, ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಚಂದ್ರಾ ಲೇಔಟ್ ನಿವಾಸದಲ್ಲಿರುವ ಜಯಚಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಿ ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ನೋಟು ಬದಲಾವಣೆ ಪ್ರಕರಣದಲ್ಲಿ ಶಾಮೀಲಾಗಿರುವ ವಿವಿಧ ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin