ಚಿತ್ರಕಲಾವಿದರ ಕೈಚಳಕದಲ್ಲಿ ವಿನಾಯಕನ ವಿವಿಧ ರೂಪ

ಈ ಸುದ್ದಿಯನ್ನು ಶೇರ್ ಮಾಡಿ

belgam-6

ಗಣೇಶ ಚತುರ್ಥಿ ಬಂತೆಂದರೆ ದೇಶಾದ್ಯಂತ ಹಳ್ಳಿ, ನಗರಗಳಲ್ಲಿ ಗಲ್ಲಿಗಳಲ್ಲಿ ಗಣೇಶ ವಿಗ್ರಹಗಳ ವೈವಿದ್ಯಮಯ ರೂಪ, ವಿನ್ಯಾಸಗಳಲ್ಲಿ ರೂಪಿಸಿ, ಪ್ರತಿಷ್ಠಾಪನೆ ಮಾಡಿ ಪೂಜಿಸುವುದು ಕಂಡು ಬರುತ್ತದೆ. ಬಾಲಗಂಗಾಧರ ತಿಲಕರು ಪ್ರಾರಂಭಿಸಿದ ಸಾರ್ವಜನಿಕ ಗಣೇಶ ಉತ್ಸವ ಜನಜಾಗೃತಿ ಮೂಡಿಸುವ ಅವರ ಉದ್ದೇಶ ಸಫಲವಾಗದಿರಬಹುದು. ಆದರೆ ಇಂದು ಅವರ ಕನಸಿನ ಆಚರಣೆ ವ್ಯಾಪಾರೀಕರಣದ ರೂಪ ಪಡೆಯುತ್ತಿರು ವುದನ್ನು ನಾವು ಕಾಣುತ್ತಿದ್ದೇವೆ. ದೇವತೆಗಳಲ್ಲಿ ಅಗ್ರ ಪೂಜೆಗೊಳ್ಳುವ ವಿಘ್ನ ವಿನಾಶಕ ದೇಶ ವಿದೇಶಗಳಲ್ಲೂ ಪೂಜಿಸಲ್ಪಡುತ್ತಾನೆ.
ಗಣಪತಿಮೂರ್ತಿ ಕಲಾಕಾರರ ಕಲ್ಪನೆ, ಭಕ್ತ ಸಮೂಹದ ಆಗ್ರಹಗಳಿಂದ ರಾಮಾಯಣ, ಮಹಾಭಾರತ ಪೌರಾಣಿಕ, ಧಾರ್ಮಿಕ, ಸಾಮಾಜಿಕ ಕಥಾ ದೃಶ್ಯಾವಳಿಗಳನ್ನೊಳಗೊಂಡು ಶ್ರೀ ಗಣೇಶನ ಪ್ರತಿಷ್ಠಾಪನೆ ಮಾಡಿ ಅದ್ದೂರಿ ಅಲಂಕಾರಗಳಿಂದ ಜನರನ್ನು ಆಕರ್ಷಿಸಿ ರಂಜಿಸುವುದು ಒಂದೆಡೆಯಾದರೆ, ಚಿತ್ರಕಲಾವಿದರೂ ಸಹ ತಮ್ಮ ಬಣ್ಣ, ಕುಂಚಗಳಲ್ಲಿ ಗಣೇಶನನ್ನು ಚಿತ್ರಿಸಿರುವು ದನ್ನೂ ಕಾಣುತ್ತೇವೆ.ಅಂತಹ ಕಲಾವಿದರಲ್ಲಿ ಧಾರವಾಡದ ಭಾರತೀಯ ಕಲಾಕೇಂದ್ರದಲ್ಲಿ ಚಿತ್ರಕಲಾ ಉಪನ್ಯಾಸಕರಾಗಿರುವ ಎನ್.ಆರ್. ನಾಯ್ಕರ್ ಒಬ್ಬರಾಗಿದ್ದಾರೆ. ಇವರು ಚಿತ್ರಿಸಿದ ಗಣೇಶನ 40 ಕಲಾಕೃತಿಗಳಲ್ಲಿ ಕುಂಚಬಣ್ಣಗಳ ಸಾಮಿಪ್ಯದಲ್ಲಿ ಮೂಡಿಬಂದ ವಿನಾಯಕನ ವಿರಾಟ ರೂಪಗಳನ್ನು ಕಾಣಬಹುದು. ಆಕರ್ಷಕ ಜನಪದ ವರ್ಣಗಳಲ್ಲಿ ಮೂಡಿದ ಗಣೇಶ ಹಿತ-ಮಿತ ರೇಖಾವಿನ್ಯಾಸಗಳ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ.
ಗಣೇಶನಿಗೆ ಪ್ರಿಯ ಖಾದ್ಯಗಳಾದ ಮೋದಕ, ಹಣ್ಣುಗಳನ್ನು ಸೇವಿಸಿ ಸಂತುಷ್ಠನಾದ ಭಾವನೆ ಮೂಡಿಸುವ ವಿವಿಧ ನಾಮಾಧಾರಿ ಗಣೇಶ. ಇನ್ನೂ ಕೆಲವು ಕಲಾಕೃತಿಗಳಲ್ಲಿ ಬೇರೆ-ಬೇರೆ ವಾದ್ಯಗಳನ್ನು ನುಡಿಸುತ್ತಿರುವ ಗಾನವಿದೂಷಿಯಂತೆ, ಗಾನ ಮಾಧುರ್ಯದಲ್ಲಿ ತಲ್ಲೀನನಾದಂತೆ, ಕಂಡರೆ ಇನ್ನೂಕೆಲವುಗಳಲ್ಲಿ ಹೊಸ ಹಾಡಿಗೆ ಟ್ಯೂನಿಂಗ್ ಹಾಕುತ್ತಿರುವಂತೆ ಆಲೋಚನ ಲಹರಿಯಲ್ಲಿರುವಂತೆ ಭಾಸವಾಗುತ್ತದೆ.ಮಿಶ್ರ ಮಾಧ್ಯಮದ ವರ್ಣಸಂಯೋಜನೆಯಲ್ಲಿ ಪೋಟೊಜನಿಕ್, ಇಂಡಿಯನ್ ಇಂಕ್ ಹಾಗೂ ಅಕ್ರೇಲಿಕ್ ಬಣ್ಣಗಳನ್ನು ಬಳಸಿದ್ದಾರೆ.

ಇವುಗಳಲ್ಲಿ ನಾಯ್ಕರ್‍ರವರ ಸೃಜನಶೀಲತೆ ಹಾಗು ಪ್ರಯೋಗಶೀಲತೆ ಮತ್ತು ನವ್ಯತೆ ಹಾಗೂ ಮೈವಳಿಕೆಗಳನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ. ಕಲೆ ಎಲ್ಲರನ್ನೂ ಆಕರ್ಷಿಸುತ್ತದೆ ಆದರೆ ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ ಎಂಬಂತೆ ನಾಯ್ಕರ್ ಅವರನ್ನು ಕಲೆ ಅಪ್ಪಿಕೊಂಡಿದೆ ಎಂಬುದಕ್ಕೆ ಅವರ ಕಲಾಕೃತಿಗಳೇ ಸಾಕ್ಷಿ. ಐತಿಹಾಸಿಕ ಖ್ಯಾತಿಯ ಬಾಗಲಕೋಟೆ ಜಿಲ್ಲೆ ಹಲವಾರು ಕವಿಗಳು ಕಲಾವಿದರಿಗೆ ಜನ್ಮ ನೀಡಿದೆ. ಇದೇ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಎಂಬ ಪುಟ್ಟ ಗ್ರಾಮದವರಾದ ನಿಂಗಪ್ಪ ರಾಮಪ್ಪ ನಾಯ್ಕರ್ 1-6-1970ರಲ್ಲಿ ಜನಿಸಿದರು.
ಬದಾಮಿಯಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿ ತಮ್ಮ ಬಾಲ್ಯದ ಆಸೆಯಂತೆ ಚಿತ್ರಕಲಾ ಶಿಕ್ಷಣವನ್ನು ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪೂರೈಸಿದರು. ಅವರ ಆಸೆ ಹಾಗೂ ಸತತ ಪರಿಶ್ರಮದ ಫಲವಾಗಿ ಕಲಾದೇವಿ ಅವರಿಗೆ ಈ ವಿದ್ಯಾನಗರಿಯ ಭಾರತೀಯ ಕಲಾಕೇಂದ್ರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಭಾಗ್ಯನೀಡಿದ್ದಾಳೆ.

ಲೇಖಕರು – ಸಿ.ಸಿ. ಬಾರಕೇರ, ಧಾರವಾಡ

 

► Follow us on –  Facebook / Twitter  / Google+

Facebook Comments

Sri Raghav

Admin