ಚಿತ್ರಕಲಾ ಪರೀಕ್ಷೆಗೆ ಆನ್‍ಲೈನ್‍ನಲ್ಲಿ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಡ್ರಾಯಿಂಗ್ ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಶೇ.50ರಷ್ಟು ಶುಲ್ಕ ಕಡಿಮೆ ಮಾಡಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಾದ ವಿ.ಸುಮಂಗಲ ತಿಳಿಸಿದರು. ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಇಂದು ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ -2019ರಲ್ಲಿ ಚಿತ್ರಕಲಾ ಶಿಕ್ಷಣ ಕುರಿತ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ನವೆಂಬರ್‍ನಲ್ಲಿ ನಡೆಯಲಿರುವ ಡ್ರಾಯಿಂಗ್ ಪರೀಕ್ಷೆಗಳಿಗೆ ಸೆ.18ರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅ.5 ಕಡೆ ದಿನವಾಗಿದ್ದು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ನೋಂದಾವಣಿ ಮಾಡಿಕೊಳ್ಳಬೇಕು ಎಂದರು.ಒಂದು ಸಾವಿರಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಕರಿದ್ದಾರೆ. ಇಂದಿನ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗಲಿದ್ದು, ಮಕ್ಕಳಿಗೆ ಚಿತ್ರಕಲೆ ಮೂಲಕ ಮೌಲ್ಯಯುತ ಶಿಕ್ಷಣ ನೀಡುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಾಗುತ್ತದೆ. ಮೂಲೆಗುಂಪಾಗುತ್ತಿರುವ ಚಿತ್ರಕಲೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕಪಟ್ಟಿಗಳನ್ನು ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. 1170 ವಿದ್ಯಾರ್ಥಿಗಳ ಅಂಕ ಪಟ್ಟಿಯಲ್ಲಿ ಉಂಟಾಗಿದ್ದ ದೋಷವನ್ನು ಪತ್ತೆಹಚ್ಚಿ ಸರಿಪಡಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಪ್ರಗತಿಗಿಂತ ಅಂಕಗಳ ಹಿಂದೆ ಓಡುವ ಪರಿಸ್ಥಿತಿ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಣ ಇಲ್ಲ. ಅಕ್ಷರ ಹಾಗೂ ಚಿತ್ರಕಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿದೆ. ಮಕ್ಕಳು ಮೊಬೈಲ್‍ನಲ್ಲೇ ಮುಳುಗುತ್ತಿದ್ದಾರೆ. ಇದು ಅಪಾಯಕಾರಿ. ಹೆಚ್ಚು ಹೊತ್ತು ಮೊಬೈಲ್‍ನಲ್ಲಿ ಮಕ್ಕಳು ತಲ್ಲೀನರಾಗುವುದರಿಂದ ಮೆದುಳಿಗೆ ಹಾನಿಯಾಗುತ್ತದೆ. ಇದು ತಪ್ಪಬೇಕು. ಸಾಹಿತ್ಯ, ಸಂಗೀತ, ಲಲಿತ ಕಲೆಗಳ ಮೂಲಕ ನೈತಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ನಂತರ ನಡೆದ ವಿಚಾರಗೋಷ್ಠಿಯಲ್ಲಿ ವನಕಲ್ ಮಲ್ಲೇಶ್ವರ ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಕರ್ನಾಟಕ ರಾಜ್ಯ ಚಿತ್ರಕಲಾ ಸಂಘದ ರಾಧ್ಯಕ್ಷ ಬಿ.ಜಿ.ಅವಟಿ, ಗೌರವಾಧ್ಯಕ್ಷ ಮಹಾಂತೇಶ್ ಅಕಂಠಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪಸಾಹೇಬ್ ಗಾಣಿಗೇರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.

Facebook Comments