ಚಿತ್ರದುರ್ಗದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಅನಾವರಣ, ಸೌಲಭ್ಯಗಳ ವಿತರಣೆಯ ಹೂರಣ

ಈ ಸುದ್ದಿಯನ್ನು ಶೇರ್ ಮಾಡಿ

Chitradurga-Congress

ಚಿತ್ರದುರ್ಗ, ಮೇ 13- ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಕಲರವ, ಕಾಂಗ್ರೆಸ್ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗೆ ಹಿಡಿದ ಕೈಗನ್ನಡಿಯ ಪ್ರತಿಬಿಂಬ ಅನಾವರಣಗೊಂಡಿತ್ತು. ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸರ್ಕಾರಕ್ಕೆ ಸಹಕಾರ ನೀಡಿದ ಜನರಿಗೆ ನಮಿಸಲು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ದರು.  ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸುಮಾರು ಒಂಭತ್ತು ಜಿಲ್ಲೆಗಳಿಂದ 400 ಬಸ್‍ಗಳಲ್ಲಿ ಸಾವಿರಾರು ಫಲಾನುಭವಿಗಳು ಕೋಟೆ ನಾಡಿಗೆ ಆಗಮಿಸಿದ್ದರಿಂದ ಮದಕರಿ ನಾಯಕನ ನಾಡು ಜನಜಂಗುಳಿಯಿಂದ ಗಿಜಿಗುಡುತ್ತಿತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರಕ್ಕೆ 4 ವರ್ಷದ ಸಂಭ್ರಮ. ಸರ್ಕಾರ ಜಾರಿಗೊಳಿಸಿದ ಅನ್ನಭಾಗ್ಯ, ಕ್ಷೀರಭಾಗ್ಯ, ಸೂರುಭಾಗ್ಯ, ನೀರು, ರಸ್ತೆ, ವಿದ್ಯಾಸಿರಿ, ಕೃಷಿಭಾಗ್ಯ, ಮನಸ್ವಿನಿ ಹೀಗೆ ಸರ್ಕಾರ ಕೈಗೊಂಡಿರುವ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿರುವ ಬಗ್ಗೆ ಸಮಾರಂಭದಲ್ಲಿ ಮನವರಿಕೆ ಮಾಡಿಕೊಡಲಾಯಿತು.  ಪ್ರತಿಪಕ್ಷಗಳ ಅನಗತ್ಯ ಟೀಕೆಗೆ ತಲೆಕೆಡಿಸಿಕೊಳ್ಳದಂತೆ ಸರ್ಕಾರವನ್ನು ಮುನ್ನಡೆಸುತ್ತಾ ಬಂದಿರುವ ಸಿದ್ದರಾಮಯ್ಯ ಅವರನ್ನು ವಿಶೇಷವಾಗಿ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಅಷ್ಟೇ ಅಲ್ಲದೆ ಎಲ್ಲಾ ವರ್ಗದಲ್ಲಿರುವ ಹಿಂದುಳಿದವರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು. ವಂಚಿತರಿಗೆ, ದಮನಿತರಿಗೆ ದನಿ ಆಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಯೋಜನೆಗಳಿಗೆ ಸಭೆಯಲ್ಲಿ ಜೈಕಾರ ಮೊಳಗಿತು.  ಸಮಾವೇಶದಲ್ಲಿ ಬಗರ್‍ಹುಕುಂ ಸಾಗುವಳಿ ಚೀಟಿ, ಜಮೀನು ಹಕ್ಕುಪತ್ರ ವಿತರಣೆ, ನಿರುದ್ಯೋಗಿಗಳಿಗೆ ಸಾಲಸೌಲಭ್ಯ, ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ, ಕೃಷಿ ಇಲಾಖೆಯಿಂದ ಸಹಾಯಧನ, ಸ್ವಸಹಾಯ ಸಂಘಗಳ ಸದಸ್ಯರಿಗೆ ಸಹಾಯಧನ ವಿತರಣೆ, ಬರ ಸಂತ್ರಸ್ತರಿಗೆ ಪರಿಹಾರ ವಿತರಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ವಿತರಿಸಿದರು.

chitradurga 2

ಕಾಂಗ್ರೆಸ್ ಸರ್ಕಾರಕ್ಕೆ ಜನತೆ ಆಶೀರ್ವಾದ ಮಾಡಿ ಇಂದಿಗೆ 4 ವರ್ಷವಾಗಿದೆ. ಮುಂದೆಯೂ ನಮಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಬರ ಪರಿಹಾರವನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.  ನಾಲ್ಕು ವರ್ಷಗಳ ಕಾಲ ಸರ್ಕಾರ ಮಾಡಿದ ಸಾಧನೆಗಳನ್ನು ಜನರ ಮುಂದಿಟ್ಟ ಅವರು, ಈ ವರ್ಷವೂ ಕೂಡ ಇನ್ನೂ ಹೆಚ್ಚಿನ ಜನಪರ ಕೆಲಸಗಳನ್ನು ಮಾಡಿ ಮುಂದೆ 2018ರಲ್ಲಿ ಜನರ ವಿಶ್ವಾಸವನ್ನು ಮತ್ತೆ ನಾವೇ ಗಳಿಸುತ್ತೇವೆ ಎಂದರು.

chitradurga 3

ಪ್ರತಿಪಕ್ಷಗಳ ಟೀಕೆಗಳ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅವರು ಮಾಡುವ ಆಧಾರ ರಹಿತ ಆರೋಪಗಳಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಹೇಳಿದರು.  ಈವರೆಗೆ ಅವರು ಮಾಡಿರುವ ಯಾವ ಆರೋಪಗಳು ಸಾಬೀತಾಗಿಲ್ಲ. ಕೋಮು ಭಾವನೆಗಳನ್ನು ಕೆರಳಿಸುವ ಕೆಲಸಗಳನ್ನು ಮಾಡುತ್ತಿರುವ ಅವರ ಕೆಲಸಕ್ಕೆ ಜನ ಮಣೆ ಹಾಕುವುದಿಲ್ಲ ಎಂದು ಹೇಳಿದರು. ಸರ್ಕಾರ ಈ ನಾಲ್ಕು ವರ್ಷಗಳಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ವರ್ಗಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಎಷ್ಟೆಷ್ಟು ಹಣವನ್ನು ಬಿಡುಗಡೆ ಮಾಡಿದೆ ಎಂಬುದನ್ನು ಸಿಎಂ ವಿವರಿಸಿದರು.ಜಾತಿ ಸಮೀಕ್ಷೆಯ ಬಗ್ಗೆ ಯಾವುದೇ ಹುರುಳಿಲ್ಲ ಎಂದು ಹೇಳಿರುವುದನ್ನು ನಾವು ಒಪ್ಪುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.  ಎಲ್ಲಾ ಜಾತಿ, ಜನಾಂಗಗಳ ಶೈಕ್ಷಣಿಕ, ಸಾಮಾಜಿ, ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.  ಮುಂದಿನ ಚುನಾವಣೆಯ ನಾಯಕತ್ವವನ್ನು ನಾನೇ ವಹಿಸುತ್ತೇನೆ. ನನ್ನ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ. ಸಿಎಂ ಯಾರಾಗಬೇಕು ಎಂಬುದನ್ನು ಶಾಸಕಾಂಗ ಸಭೆ ನಿರ್ಧರಿಸುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

chitradurga 4

ನಾವು ರೂಪಿಸಿರುವ ಜನಪರ ಯೋಜನೆಗಳು ಅದಕ್ಕೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಬೆಂಬಲವೇ ನಮಗೆ ಶ್ರೀರಕ್ಷೆಯಾಗಿದೆ. ನಮ್ಮ ಸಾಧನೆಗಳು ನಮ್ಮ ಕೈ ಹಿಡಿಯುತ್ತವೆ. ಜನರಿಗೆ ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.  ಸಚಿವರಾದ ಕಾಗೋಡುತಿಮ್ಮಪ್ಪ, ರಮೇಶ್‍ಕುಮಾರ್, ಕೆ.ಜೆ.ಜಾರ್ಜ್, ಎಸ್.ಎಸ್.ಮಲ್ಲಿಕಾರ್ಜುನ್, ರೋಷನ್‍ಬೇಗ್, ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಎಂ.ಕೃಷ್ಣಪ್ಪ, ಎಂ.ಆರ್.ಸೀತಾರಾಮ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಎನ್.ವೈ.ಗೋಪಾಲಕೃಷ್ಣ, ಸುಧಾಕರ್, ರಘುಆಚಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

chitradurga 01

 

ಪ್ರತಿಭಟನೆಗೆ ಮುಂದಾದ ಮಹಿಳೆಯರ ತಡೆದ ಪೊಲೀಸರು : 

ಚಿತ್ರದುರ್ಗ,ಮೇ 13-ದುರ್ಗಕ್ಕೆ ವೈದ್ಯಕೀಯ ಕಾಲೇಜು ಘೋಷಿಸುವಂತೆ ಒತ್ತಾಯಿಸಿ ಸಂಸ್ಥೆಯೊಂದರ ಕೆಲ ಮಹಿಳೆಯರು ಕಪ್ಪು ಸೀರೆ ಉಟ್ಟು ಪ್ರತಿಭಟನೆ ನಡೆಸಲು ಮುಂದಾದುದನ್ನು ಪೆಪೊಲೀಸರು ತಡೆದರು.   ನಗರದಲ್ಲಿಂದು ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಸೌಲಭ್ಯ ವಿತರಣೆಯೇ ಸಂಭ್ರಮ ಜನರಿಗೆ ನಮನ-ಜನರಿಗೆ ಮನನ ಸಮಾವೇಶಕ್ಕೆ ಮುನ್ನೆ ಧರಣಿ ಸಂಸ್ಥೆಯ ಅಧ್ಯಕ್ಷೆ ರಮಾ ನಾಗರಾಜ್ ನೇತೃತ್ವದಲ್ಲಿ ಕೆಲ ಮಹಿಳೆಯರು ಕಪ್ಪು ಸೀರೆ ಉಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಪಟ್ಟಿ ತೋರಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಮುಖ್ಯಮಂತ್ರಿಗಳು ಬರುವ ಮುನ್ನವೇ ಪೊಲೀಸರು ಧಾವಿಸಿ ಅಧ್ಯಕ್ಷೆ ರಮಾ ನಾಗರಾಜ್ ಸೇರಿದಂತೆ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ಪ್ರತಿಭಟನೆಯನ್ನು ವಿಫಲಗೊಳಿಸಿದರು.

ನಾರಾಯಣಸ್ವಾಮಿ ಗರಂ : 

ಚಿತ್ರದುರ್ಗ,ಮೇ 13-ನಗರದಲ್ಲಿಂದು ಹಮ್ಮಿಕೊಂಡಿರುವ ಸೌಲಭ್ಯಗಳ ವಿತರಣೆ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಲ್ಲ ಎಂಬ ಕಾರಣಕ್ಕೆ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರೊಂದಿಗೆ ನಾರಾಯಣಸ್ವಾಮಿ ಈ ಕುರಿತು ಗರಂ ಆಗಿ ಮಾತನಾಡಿ, ನಾನು ಕಾರ್ಯಕ್ರಮದಿಂದ ಹೊರ ಹೋಗುತ್ತೇನೆ. ಇದರ ಗೋಜೆ ನನಗೆ ಬೇಡ. ಕಾರ್ಯಕ್ರಮದಿಂದ ಹೊರ ಹೋಗಲು ಮುಂದಾದರು.
ಸಚಿವ ಆಂಜನೇಯ ಸಮಾಧಾನಪಡಿಸಲು ಯತ್ನಿಸಿದರೂ ನಾರಾಯಣಸ್ವಾಮಿ ತಣ್ಣಗಾಗಲಿಲ್ಲ. ಬೇರೆ ಪಕ್ಷದವರ ಹೆಸರಿದೆ. ನಮ್ಮ ಸರ್ಕಾರದ ಕಾರ್ಯಕ್ರಮದಲ್ಲಿ ನನ್ನದೇ ಹೆಸರಿಲ್ಲ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು.   ಕಡೆಗೆ ಆಂಜನೇಯ ಸೇರಿದಂತೆ ಹಲವು ಮುಖಂಡರು ನಾರಾಯಣಸ್ವಾಮಿ ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರಲ್ಲದೆ ವೇದಿಕೆಗೆ ಕರೆತಂದು ಕೂರಿಸಿದರು.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin