ಚಿನ್ನಮ್ಮನ ಕುದುರೆ ವ್ಯಾಪಾರ ಕ್ಯಾಮರಾದಲ್ಲಿ ಬಟಾಬಯಲು, ಪ್ರತಿ ಶಾಸಕರಿಗೆ 6 ಕೋಟಿ ಆಫರ್

ಈ ಸುದ್ದಿಯನ್ನು ಶೇರ್ ಮಾಡಿ

Paneer-Selvam

ಚೆನ್ನೈ, ಜೂ.13- ವಿಧಾನಸಭಾ ಇಲ್ಲವೇ ಲೋಕಸಭೆಯಲ್ಲಿ ವಿಶ್ವಾಸಮತ ಗಳಿಸಲು ಕುದುರೆ ವ್ಯಾಪಾರ ನಡೆಯೋದನ್ನು ಕೇಳಿದ್ದೇವೆ, ಇಂತಹ ಘಟನೆ ತ.ನಾಡಿನಲ್ಲಿ ಬೆಳಕಿಗೆ ಬಂದಿದೆ. ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಇತ್ತೀಚೆಗೆ ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಶಾಸಕರಿಗೆ ಚಿನ್ನ ಹಾಗೂ ನಗದು ಆಮಿಷ ಒಡ್ಡಿರುವುದನ್ನು ಸ್ವತಃ ಶಾಸಕರೇ ಒಪ್ಪಿಕೊಂಡಿದ್ದಾರೆ.

ಟೈಮ್ಸ್ ನೌ- ಮೂನ್  ಟಿವಿ ಜಂಟಿಯಾಗಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಶಾಸಕರು ಇದನ್ನು ಬಹಿರಂಗಪಡಿಸಿದ್ದಾರೆ. ಮೊದಲು ಪನ್ನೀರ್ ಸೆಲ್ವಂ ಬಣ ಪ್ರತಿ ಶಾಸಕರಿಗೆ 1 ಕೋಟಿ ಆಫರ್ ನೀಡಿತ್ತು. ಆದರೆ, ಶಶಿಕಲಾ ಬಣ 2 ಕೋಟಿಯಿಂದ 6 ಕೋಟಿಯಷ್ಟು ಹಣ, ಜೊತೆಗೆ ಚಿನ್ನ ಕೊಟ್ಟು ಶಾಸಕರನ್ನ ಖರೀದಿಸಿದೆ.   ಈ ಸತ್ಯವನ್ನು ಅಣ್ಣಾ ಡಿಎಂಕೆ ಶಾಸಕ ಶರವಣನ್ ಸ್ಟಿಂಗ್ ಆಪರೇಷನ್‍ನಲ್ಲಿ ಬಾಯ್ಬಿಟ್ಟಿದ್ದಾರೆ.


ನಾನು 2 ಕೋಟಿ ಪಡೆದು ಇ.ಪಳನಿಸ್ವಾಮಿಯವರಿಗೆ ಬೆಂಬಲ ನೀಡಿದ್ದೇನೆ. ಕೆಲವರು 6 ಕೋಟಿವರೆಗೂ ಹಣ ಪಡೆದಿದ್ದಾರೆ ಅಂತಾ ಒಪ್ಪಿಕೊಂಡಿದ್ದಾರೆ. ನಾವು ಮೊದಲು ರೆಸಾರ್ಟ್‍ಗೆ ಹೋಗಲು ಬಸ್ ಹತ್ತಿದಾಗ 2 ಕೋಟಿ, ರಾಜ್ಯಪಾಲರರ ಭೇಟಿಗೆ ಏರ್‍ಪೋರ್ಟ್‍ಗೆ ಬಂದಾಗ 4 ಕೋಟಿ, ಕೊಯಂಬತ್ತೂರು ತಲುಪಿದಾಗ ಕೆಲವರಿಗೆ 6 ಕೋಟಿ ಹಣ ಸಂದಾಯವಾಗಿದೆ ಅಂತಾ ಹೇಳಿದ್ದಾರೆ.

ನೋಟು ಅಮಾನ್ಯವಾಗಿದ್ದರಿಂದ ಹಣದ ಕೊರತೆ ಇತ್ತು. ಅದಕ್ಕೆ ಕೆಲವರಿಗೆ ಚಿನ್ನದ ರೂಪದಲ್ಲಿ ಶಶಿಕಲಾ ಅಂಡ್ ಇಪಿಎಸ್ ಕಡೆಯವರು ಬಾಕಿ ಸಂದಾಯ ಮಾಡಿದ್ರು ಅಂತಾನೂ ಹೇಳಿದ್ದಾರೆ. ಅಷ್ಟೇ ಅಲ್ಲ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ವೋಟ್ ಮಾಡೋದಕ್ಕೂ ನಮ್ಮದು ಕೆಲವು ಡಿಮ್ಯಾಂಡ್‍ಗಳಿರುತ್ತೆ ಅಂತ ಹೇಳಿಕೊಂಡಿರೋದು ಈಗ ವಿವಾದ ಹುಟ್ಟು ಹಾಕಿದೆ.

ಎಪ್ರಿಲ್, ಮೇ ತಿಂಗಳಲ್ಲಿ ಆರಂಭವಾದ ಕಾರ್ಯಾಚರಣೆ ಈ ತಿಂಗಳ ವರೆಗೂ ಮುಂದುವರಿದಿದೆ. ಫೆ.18ರಂದು ನಡೆದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಈ ಲಂಚ ನೀಡಲಾಗಿದೆ. ಶಾಸಕರು ಹೇಳಿರುವುದು ನಿಜವಾದರೆ, ಪ್ರಕರಣದ ಬಗ್ಗೆ ಸ್ಪೀಕರ್ ತನಿಖೆಗೆ ಆದೇಶಿಸಬೇಕಾಗುತ್ತಿದೆ ಹಾಗೂ ರಾಜ್ಯಪಾಲರು ವರದಿ ಕೇಳಬೇಕಾಗುತತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಪಳನಿಸ್ವಾಮಿ ಪರವಾಗಿ ಮತ ಹಾಕಲು ಶಶಿಕಲಾ ಬಣ 100ಕ್ಕೂ ಹೆಚ್ಚು ಶಾಸಕರನ್ನು ರೆಸಾರ್ಟ್‍ನಲ್ಲಿ ಇರಿಸಿಕೊಂಡಿತ್ತು.

ಮಧುರೈ ದಕ್ಷಿಣ ಕ್ಷೇತ್ರದ ಶಾಸಕ ಸರವಣನ್ ಹಾಗೂ ಸೂಲೂರು ಶಾಸಕ ಕನಕರಾಜು ಅವರು ಹಣದ ಅಮಿಷ ಒಡ್ಡಿರುವುದನ್ನು ಒಪ್ಪಿಕೊಂಡಿದ್ದಾರೆ. ಎಲ್ಲ ಶಾಸಕರಿಗೂ ತಲಾ 2 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ಹೇಳಲಾಗಿತ್ತು. ರಾಜ್ಯಪಾಲರ ಬಳಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಾಗ ಅದು ನಾಲ್ಕು ಕೋಟಿಗೆ ಹೆಚ್ಚಿತು.  ಕೂವತ್ತೂರಿಗೆ ತಲುಪಿದಾಗ ದರ 6 ಕೋಟಿ ರೂ. ಆಯಿತು. ಮರುದಿನ ನಗದು ಕೊರತೆ ಉಂಟಾದ ಹಿನ್ನೆಲೆಯಲ್ಲಿ ಚಿನ್ನ ನೀಡಲು ನಿರ್ಧರಿಸಲಾಯಿತು ಎಂದು ಸರವಣನ್ ಬಹಿರಂಗಪಡಿಸಿದ್ದಾರೆ.

ಜಯಲಲಿತಾ ನಿಧನದ ನಂತರ ಓ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳು ಸರಕಾರ ರಚಿಸಲು ಮುಂದಾಗಿದ್ದಾಗ, ರೆಸಾರ್ಟ್ ರಾಜಕಾರಣ ನಡೆದದ್ದು ಗೊತ್ತೇ ಇದೆ. ಈ ವೇಳೆ ಎರಡರಿಂದ ಆರು ಕೋಟಿ ರೂಪಾಯಿ, ಜೊತೆಗೆ ಚಿನ್ನದ ಗಟ್ಟಿ ಶಾಸಕರಿಗೆ ಸಂದಾಯವಾಗಿದೆ ಎನ್ನುವ ವಿಚಾರವನ್ನು ಕೆಲವು ಶಾಸಕರು ಬಾಯ್ಬಿಟ್ಟಿದ್ದಾರೆ.  ಓಪಿಎಸ್ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಿಗೆ ಒಂದು ಕೋಟಿಯಿಂದ ಶುರುವಾದ ಆಫರ್, ಬಸ್ ಹತ್ತುವಾಗ ಒಂದು, ವಿಮಾನ ನಿಲ್ದಾಣಕ್ಕೆ ಬಂದಾಗ ಎರಡು, ಕೊಯಂಬತ್ತೂರು ತಲುಪಿದಾಗ ನಾಲ್ಕು, ರಾಜ್ಯಪಾಲರ ಮುಂದೆ ಪೆರೇಡ್ ಮಾಡುವಾಗ ಆರು ಕೋಟಿ ರೂಪಾಯಿವರೆಗೆ ಹಣ ಸಂದಾಯವಾಗಿದೆ ಎಂದು ಶಾಸಕ ಶರವಣನ್ ಹೇಳಿದ್ದಾರೆ.

ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧಗೊಂಡ ಬಿಸಿಯಲ್ಲಿ ಇದ್ದಿದ್ದರಿಂದ, ಹೊಸ ನೋಟು ಹೊಂದಿಸಲು ಹರಸಾಹಸ ಪಟ್ಟ ಶಶಿಕಲಾ ಬೆಂಬಲಿತ ಪಳನಿಸ್ವಾಮಿ ಬಣ, ಕೊನೆಗೆ ಬೇರೆ ದಾರಿಯಿಲ್ಲದೇ ನೋಟು ಕಂತೆಯ ಬದಲು ಚಿನ್ನದ ಗಟ್ಟಿಯನ್ನು ಪರ್ಯಾಯವಾಗಿ ನೀಡಿತ್ತು ಎಂದು ಶಾಸಕ ಮಹೋದಯರು ಹೇಳಿದ್ದಾರೆ.  ಇದೆಲ್ಲಾ ತಲೆತಗ್ಗಿಸುವ ಘಟನೆಯ ನಡುವೆ, ಮುಂಬರುವ ರಾಷ್ಟ್ರಪತಿ ಚುನಾವಣೆಗೂ ಸುಮ್ಮನೇ ವೋಟ್ ಹಾಕುವುದಿಲ್ಲ, ನಮ್ಮ ವೋಟ್ ಎಷ್ಟು ಮುಖ್ಯ ಅನ್ನೋದು ಗೊತ್ತಿದೆ ಎಂದು ಸ್ಟಿಂಗ್ ಆಪರೇಶನ್ ನಲ್ಲಿ ಎಐಎಡಿಎಂಕೆ ಶಾಸಕರು ಹೇಳಿರುವುದು, ಹೊಸ ಚರ್ಚೆಗೆ ನಾಂದಿ ಹಾಡಿದೆ.

ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಟಾಲಿನ್, ಅವಿಶ್ವಾಸ ಗೊತ್ತುವಳಿಯ ವೇಳೆ ಡೀಲ್ ನಡೆದಿದೆ. ಮರುವಿಶ್ವಾಸಮತ ಪ್ರಕ್ರಿಯೆ ನಡೆಯಬೇಕೆಂದು ಒತ್ತಾಯಿಸಿ ಧರಣಿ ಕೂತಿದ್ದರು.   ಇದಕ್ಕೆ ಸಭಾಪತಿ ಒಪ್ಪದೇ ಇದ್ದಾಗ, ಡಿಎಂಕೆ ಉಚ್ಚನ್ಯಾಯಾಲಯದ ಮೊರೆ ಹೋಗಿತ್ತು. ಅಲ್ಲೂ ಅರ್ಜಿ ಅನೂರ್ಜಿತಗೊಂಡ ನಂತರ, ಈಗ ಈ ಅರ್ಜಿ ಸರ್ವೋಚ್ಚ ನ್ಯಾಯಾಲಯದ ಅಂಗಣದಲ್ಲಿದೆ. ದಕ್ಷಿಣ ಮಧುರೈ ಕ್ಷೇತ್ರದ ಶಾಸಕ ಶರವಣನ್, ಸೂಲೂರು ಕ್ಷೇತ್ರದ ಶಾಸಕ ಕನಕರಾಜ್, ಟೈಮ್ಸ್ ನಡೆಸಿದ ಸ್ಟಿಂಗ್ ಆಪರೇಶನ್ ವೇಳೆ, ಆವತ್ತು ರೆಸಾರ್ಟ್ ರಾಜಕಾರಣದಲ್ಲಿ ಏನೇನು ನಡೆಯಿತು ಎನ್ನುವುದನ್ನು ಫಿಲ್ಟರ್ ಇಲ್ಲದೇ, ಎಲ್ಲವನ್ನೂ ಹೇಳಿಬಿಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin