ಭಾರತ-ಇಂಗ್ಲೆಂಡ್ ಹೈವೋಲ್ಟೇಜ್ ಟಿ-20 ಹಣಾಹಣಿಗೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Chinnaswamy--01

ಬೆಂಗಳೂರು, ಜ.31- ಟಿ-20 ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದ್ದು, ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿರುವ ಆತಿಥೇಯ ಭಾರತ, ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.  ಆದರೆ, ಮೊದಲ ಎರಡು ಪಂದ್ಯಗಳಲ್ಲಿ ಸಮಯೋಚಿತ ಆಟವಾಡಿರುವ ಪ್ರವಾಸಿ ಇಂಗ್ಲೆಂಡ್ ಅಪಾಯ ತಂಡವಾಗಿದ್ದು, ತಿರುಗೇಟು ನೀಡಿ ವಿಜಯ ಪತಾಕೆ ಹಾರಿಸುವುದಕ್ಕೆ ಸಜ್ಜಾಗಿದೆ. ಹೀಗಾಗಿ ನಾಳಿನ ಪಂದ್ಯ ಉಭಯ ತಂಡಗಳಿಗೆ ಡು ಆರ್ ಡೈ ಎಂಬಂತಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಕತೂಹಲ ಮೂಡಿಸಿದೆ.

ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಕೊಹ್ಲಿ ಪಡೆ ಟಿ-20 ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಸಮಚಿತ್ತ ಆಟವಾಡುವಲ್ಲಿ ಎಡವಿದೆ. ಕಾನ್ಪುರದ ಗ್ರೀನ್‍ಪಾರ್ಕ್‍ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಆಂಗ್ಲರ ವಿರುದ್ಧ 7 ವಿಕೆಟ್‍ನಿಂದ ಸೋಲನುಭವಿಸಿತ್ತು. ವಿದರ್ಭ ಕ್ರೀಡಾಂಗಣದಲ್ಲಿ ನಡೆದ ಎರಡನೆ ಪಂದ್ಯದಲ್ಲಿ ಜಸ್ಬಿತ್ ಬುಂಬ್ರಾ ಅವರ ಶಿಸ್ತಿನ ಬೌಲಿಂಗ್ ದಾಳಿಗೆ ಸಿಲುಕಿ ಇಂಗ್ಲೆಂಡ್ ಕೇವಲ 5 ರನ್‍ಗಳಿಂದ ಸೋಲೊಪ್ಪಿಕೊಂಡಿತ್ತು.  ಹೀಗಾಗಿ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಆತಿಥೇಯ ತಂಡಕ್ಕೆ ತಲೆನೋವಾಗಿದೆ. ಆರಂಭ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡದೆ ಇರುವುದರಿಂದ ಗರಿಷ್ಠ ಮೊತ್ತ ಕಲೆ ಹಾಕಲು ವಿಫಲವಾಗಿದೆ.

ಆದರೆ, ನಾಳಿನ ಪಂದ್ಯದಲ್ಲಿ ಪಿಚ್ ಬ್ಯಾಟಿಂಗ್‍ಗೆ ನೆರವು ನೀಡಿದ್ದು, ಭಾರತ ಒಂದು ವೇಳೆ ಬ್ಯಾಟಿಂಗ್‍ಗೆ ಅವಕಾಶ ಸಿಕ್ಕರೆ 200ರ ಗಡಿ ದಾಟಬೇಕು. ಇಲ್ಲವಾದರೆ ಸೋಲೇ ಗತಿ. ತಂಡದಲ್ಲಿ ಟಿ-20 ಸ್ಪೆಷಲಿಸ್ಟ್ ಬ್ಯಾಟ್ಸ್‍ಮನ್‍ಗಳಿದ್ದು, ಯುವರಾಜ್‍ಸಿಂಗ್, ಸುರೇಶ್ ರೈನ, ನಾಯಕ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡೆ ಮತ್ತು ಎಂ.ಎಸ್.ಧೋನಿಯಂತಹ ಬಲಾಢ್ಯ ಆಟಗಾರರಿದ್ದು, ಮೇಲ್ನೋಟಕ್ಕೆ ಬಲಾಢ್ಯ ತಂಡವಾಗಿದೆ.   ಆದರೆ, ಯಾರೊಬ್ಬರಿಂದ ಸ್ಫೋಟಕ ಆಟ ಮೂಡಿಬಂದಿಲ್ಲ. ಹೀಗಾಗಿ ನಾಳಿನ ಪಂದ್ಯದಲ್ಲಿ ಯಾರಾದರೂ ಅಬ್ಬರದ ಬ್ಯಾಟಿಂಗ್ ನಡೆಸಿದರೆ ಭಾರತಕ್ಕೆ ವಿಜಯಲಕ್ಷ್ಮಿ ಒಲಿಯುತ್ತಾಳೆ.

ಇನ್ನು ಇಂಗ್ಲೆಂಡ್ ತಂಡವು ಕೂಡ ಟಿ-20ಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು, ಎರಡೂ ಪಂದ್ಯಗಳಲ್ಲಿ ಶಿಸ್ತಿನ ಆಟವಾಡಿದ್ದು, ಭಾರತವನ್ನು ಕಟ್ಟಿ ಹಾಕಿ ಸರಣಿ ಗೆದ್ದು ಏಕದಿನ ಹಾಗೂ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ರಣತಂತ್ರ ರೂಪಿಸಿದೆ.

ಬಿಗಿ ಬಂದೋಬಸ್ತ್ : 

ಬೆಂಗಳೂರು, ಜ.31-ನಾಳೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆಯಲಿರುವ ಟಿ-20 ಕ್ರಿಕೆಟ್ ಪಂದ್ಯಕ್ಕೆ ಸಮರ್ಪಕ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ತಿಳಿಸಿದರು. ಬಂದೋಬಸ್ತ್ ಉಸ್ತುವಾರಿಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಹಾಗೂ ಸೆಂಟ್ರಲ್ ವಿಭಾಗದ ಡಿಸಿಪಿ ಚಂದ್ರಗುಪ್ತಾ ಅವರಿಗೆ ವಹಿಸಲಾಗಿದೆ. ಕ್ರೀಡಾಂಗಣ, ಇಂಗ್ಲೆಂಡ್-ಭಾರತ ತಂಡಗಳ ಬಂದೋಬಸ್ತ್, ಅವರು ಉಳಿದುಕೊಳ್ಳುವ ಹೊಟೇಲ್‍ನ ಬಂದೋಬಸ್ತ್ ನೋಡಿಕೊಳ್ಳಲಿದ್ದಾರೆ.
ಸಂಜೆ 4.15ಕ್ಕೆ ಭಾರತ ತಂಡ ಅಭ್ಯಾಸ ನಡೆಸಿದರೆ, 6.30ಕ್ಕೆ ಇಂಗ್ಲೆಂಡ್ ತಂಡ ಅಭ್ಯಾಸ ಮಾಡಲಿದೆ.

ಒಟ್ಟಾರೆ ಕ್ರೀಡಾಂಗಣದಲ್ಲಿ 800 ಮಂದಿ ಪೊಲೀಸರು ಗಸ್ತಿನಲ್ಲಿರುತ್ತಾರೆ. 17 ಎಸಿಪಿ, ಒಬ್ಬರು ಡಿಸಿಪಿ ಬಂದೋಬಸ್ತ್‍ನಲ್ಲಿರುತ್ತಾರೆ. ಕ್ರೀಡಾಂಗಣದ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ರೀಡಾಭಿಮಾನಿಗಳು ಯಾವುದೇ ವಸ್ತುಗಳನ್ನು ಕ್ರೀಡಾಂಗಣದೊಳಗೆ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin