ಚಿಲ್ಲರೆ ಅಭಾವದಿಂದ ವಿಮಾನ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಶುಲ್ಕಕ್ಕೆ ವಿನಾಯಿತಿ :ಜಯಂತ್ ಸಿನ್ಹಾ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

airport-parking
ನವದೆಹಲಿ, ನ.15- ಐದುನೂರು ಹಾಗೂ ಸಾವಿರ ರೂ. ಮುಖಬೆಲೆಯ ನೋಟುಗಳ ರದ್ದಿನಿಂದ ಉಂಟಾಗಿರುವ ಚಿಲ್ಲರೆ ಅಭಾವಕ್ಕೆ ಪರಿಹಾರ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಎಲ್ಲಾ ವಿಮಾನ ನಿಲ್ದಾಣಗಳ ವಾಹನ ನಿಲುಗಡೆ ಶುಲ್ಕಕ್ಕೆ ವಿನಾಯಿತಿ ನೀಡಿದೆ.
ಕೇಂದ್ರ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ಈ ಆದೇಶ ಹೊರಡಿಸಿದ್ದು, ನ.14ರ ಮಧ್ಯರಾತ್ರಿಯಿಂದ ನ.21ರ ಮಧ್ಯರಾತ್ರಿವರೆಗೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ನಿಲುಗಡೆ ಶುಲ್ಕವನ್ನು ಮುಕ್ತವಾಗಿಸಲಾಗಿದೆ.  ಸಾಕಷ್ಟು ಚಿಲ್ಲರೆ ಸಮಸ್ಯೆ ಎದುರಿಸುತ್ತಿದ್ದ ದೆಹಲಿ ಪ್ರಿಪೇಯ್ಡ್ ಟ್ಯಾಕ್ಸಿ ಸಲ್ಲಿಸಿದ್ದ ಮನವಿ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ.ಇದರಿಂದ ಚಿಲ್ಲರೆಗಾಗಿ ಪರದಾಡುತ್ತಿದ್ದ ಟ್ಯಾಕ್ಸಿ ಚಾಲಕರು, ಮಾಲೀಕರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.
ಕಾರ್, ಮ್ಯಾಕ್ಸಿಕ್ಯಾಬ್, ಮಿನಿ ಬಸ್, ಬಸ್ ಸೇರಿದಂತೆ ನಿತ್ಯ ಸುಮಾರು 60 ಸಾವಿರ ವಾಹನಗಳು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿತ್ಯ ನಿಲುಗಡೆಯಾಗುತ್ತಿದ್ದವು. ನಿಲುಗಡೆಗೆ ಮೊದಲ ಎರಡು ಗಂಟೆಗೆ 100ರೂ.ನಿಂದ ನಿಲುಗಡೆ ಶುಲ್ಕ ಆರಂಭವಾಗುತ್ತಿತ್ತು. ದೊಡ್ಡ ವಾಹನಗಳಿಗೆ 300 ರಿಂದ 500 ರೂ.ವರೆಗೂ ಇದೆ. ಎರಡು ಗಂಟೆ ನಂತರ ಎಷ್ಟು ಸಮಯ ನಿಂತಿದೆ ಎನ್ನುವುದನ್ನು ಗಮನಿಸಿ ವಾಹನಗಳಿಗೆ ನಿಲುಗಡೆ ಶುಲ್ಕ ವಿಧಿಸಲಾಗುತ್ತಿತ್ತು.  ಇದೀಗ 500ರೂ. ಹಾಗೂ 1000ರೂ. ನೋಟನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದು, ಎಲ್ಲೆಡೆ ಚಿಲ್ಲರೆ ಅಭಾವ ತಲೆದೋರಿದೆ. ಎಲ್ಲಿಯೂ 100ರೂ. ನೋಟು ಲಭ್ಯತೆ ಇಲ್ಲದಂತಾಗಿದೆ. ಸಿಕ್ಕರೂ, ವಿರಳ ಪ್ರಮಾಣದಲ್ಲಿ ಸಿಗುತ್ತಿರುವುದರಿಂದ ದೇಶಾದ್ಯಂತ ವಾಹನ ಮಾಲೀಕರು ಕೇಂದ್ರಕ್ಕೆ ಮನವಿ ಮಾಡಿದ್ದರು. ಇದನ್ನು ಸರ್ಕಾರ ಪುರಸ್ಕರಿಸಿದೆ.

 

ನಿಲುವು ಸ್ವಾಗತಾರ್ಹ: ನ.21ರವರೆಗೆ ವಾಹನಗಳ ನಿಲುಗಡೆ ಶುಲ್ಕ ಮುಕ್ತವಾಗಿರುವುದು ಸಂತಸ ತಂದಿದೆ. ಚಿಲ್ಲರೆ ಹುಡುಕುವುದು ಕಷ್ಟವಾಗಿತ್ತು. ಕ್ರೆಡಿಟ್, ಡೆಬಿಟ್ ಕಾರ್ಡ್ ಸ್ವೈಪ್ ಮಾಡಿ, ರಸೀದಿ ಪಡೆದು ಪಾರ್ಕಿಂಕ್ ಮಾಡುವುದು ಬಹಳ ದೀರ್ಘಾವಧಿ ಕೆಲಸ. ಇದರಿಂದ ಗ್ರಾಹಕರಿಗೆ ತೊಂದರೆ ಆಗುತ್ತಿತ್ತು. ಕೇಂದ್ರ ಸರ್ಕಾರ ಕೈಗೊಂಡ ನಿಲುವು ಸ್ವಾಗತಾರ್ಹ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.

Facebook Comments

Sri Raghav

Admin