ಚುನಾವಣಾ ಆಯೋಗದ ವರ್ಚಸ್ಸಿಗೆ ಧಕ್ಕೆ ತರುವವರನ್ನು ಶಿಕ್ಷಿಸಲು ಅವಕಾಶ ಕೊಡಿ

ಈ ಸುದ್ದಿಯನ್ನು ಶೇರ್ ಮಾಡಿ

Election-Commission

ನವದೆಹಲಿ, ಜೂ.1-ಚುನಾವಣಾ ಆಯೋಗದ ಸೂಚನೆಗಳು ಮತ್ತು ಆದೇಶಗಳನ್ನು ಧಿಕ್ಕರಿಸಿ ಪ್ರಾಧಿಕಾರದ ವರ್ಚಸ್ಸಿಗೆ ಧಕ್ಕೆ ತರುವ ರಾಜಕೀಯ ಪಕ್ಷಗಳು ಮತ್ತು ಮುಖಂಡರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು (ಶಿಕ್ಷೆ ವಿಧಿಸಲು) ತನಗೆ ಅಧಿಕಾರ ನೀಡಬೇಕೆಂದು ಆಯೋಗವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.  ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ನಡುವೆ ಕೆಲವು ಮಹತ್ವದ ವಿಷಯದಲ್ಲಿ ಈಗಾಗಲೇ ಭುಗಿಲೆದ್ದಿರುವ ವಿವಾದಗಳ ಹಿನ್ನೆಲೆಯಲ್ಲಿ ಆಯೋಗದ ಈ ಹೊಸ ನಡೆ ತೀವ್ರ ಕುತೂಹಲ ಮೂಡಿಸಿದೆ.

ಚುನಾವಣಾ ಆಯೋಗಕ್ಕೆ ಅವಮಾನ ಮಾಡುವ ಮತ್ತು ಅದರ ವರ್ಚಸ್ಸಿಗೆ ಧಕ್ಕೆ ತರುವ ಯಾವುದೇ ವ್ಯಕ್ತಿಯನ್ನು ಶಿಕ್ಷಿಸಲು ಅಧಿಕಾರ ನೀಡುವ ನ್ಯಾಯಾಲಯ ನಿಂದನೆಗಳ ಕಾಯ್ದೆ 1971ರ ಅಧಿನಿಯಮಕ್ಕೆ ತಿದ್ದುಪಡಿ ಮಾಡಬೇಕೆಂದು ಕೇಂದ್ರದ ಕಾನೂನು ಸಚಿವಾಲಯಕ್ಕೆ ಆಯೋಗ ಮನವಿ ಸಲ್ಲಿಸಿದೆ. ಈ ಕುರಿತು ಸಚಿವಾಲಯಕ್ಕೆ ಪತ್ರ ಬರೆದಿರುವ ಆಯೋಗವು, ಆಯೋಗದ ನಿರ್ಧಾರಗಳು ಮತ್ತು ಸೂಚನೆಗಳ ವಿರುದ್ಧ ನಿರಂತರ ಆಪಾದನೆಗಳನ್ನು ಮಾಡುತ್ತಿವೆ. ಅಲ್ಲದೆ ವಿನಾಕಾರಣ ಪ್ರಾಧಿಕಾರದ ಕಾರ್ಯನಿರ್ವಹಣೆ ಔಚಿತ್ಯವನ್ನೇ ಪ್ರಶ್ನಿಸುವಂತಾಗಿದೆ. ರಾಜಕೀಯ ಪಕ್ಷಗಳು ಮತ್ತು ಪ್ರಭಾವಿಗಳು ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಕ್ತ ಕಾನೂನು ರೂಪಿಸಬೇಕೆಂದು ಮನವಿ ಮಾಡಿದೆ.


ವಿದ್ಯುನ್ಮಾನ ಮತಯಂತ್ರಗಳಿಗೆ ಕನ್ನ ಹಾಕಬಹುದೆಂಬ ವಿವಾದ ಭುಗಿಲೆದ್ದು, ರಾಜಕೀಯ ಪಕ್ಷಗಳು ಮತ್ತು ಆಯೋಗದ ನಡುವೆ ಇತ್ತೀಚೆಗೆ ವಾದ- ವಾಗ್ವಾದಗಳಿಗೆ ಕಾರಣವಾದ ಪ್ರಕರಣದ ಹಿನ್ನೆಲೆಯಲ್ಲಿಯೂ ಈ ಆಗ್ರಹಕ್ಕೆ ಪ್ರಾಮುಖ್ಯತೆ ಲಭಿಸಿದೆ.  ತಾನು ಸ್ಥೂಲವಾಗಿ ಪರಾಮರ್ಶಿಸಿ ನೀಡುವ ಆದೇಶಗಳು ಮತ್ತು ಸೂಚನೆಗಳನ್ನು ಕೆಲವು ರಾಜಕೀಯ ಪಕ್ಷಗಳು ಮತ್ತು ಮುಖಂಡರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಆಯೋಗದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅಲ್ಲದೆ, ಕಾನೂನಿಗೆ ಅವಿಧೇಯತೆ ತೋರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ತಪ್ಪಿತಸ್ಥರ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮತ್ತು ಶಿಕ್ಷೆಗೆ ಒಳಪಡಿಸಲು ತನಗೆ ಹೆಚ್ಚಿನ ಅಧಿಕಾರ ಬೇಕಿದೆ. ಇದಕ್ಕಾಗಿ ನ್ಯಾಯಾಲಯ ನಿಂದನೆಗಳ ಕಾಯ್ದೆ, 1971ರ ಅಧಿನಿಯಮಕ್ಕೆ ಸೂಕ್ತ ತಿದ್ದುಪಡಿಗಳ ಅಗತ್ಯವಿದೆ ಎಂದು ಆಯೋಗವು ಮನವಿ ಪತ್ರದಲ್ಲಿ ಸವಿವರವಾಗಿ ತಿಳಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮೊದಲಿನಿಂದಲೂ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದು, ಇದಕ್ಕೆ ಕೆಲವು ರಾಜಕೀಯ ಪಕ್ಷಗಳು ಕೈ ಜೋಡಿಸಿರುವ ಬಗ್ಗೆ ಆಯೋಗ ಅಸಮಾಧಾನ ವ್ಯಕ್ತಪಡಿಸಲೇ ಬಂದಿದೆ.   ವಿದ್ಯುನ್ಮಾನ ಮತಯಂತ್ರಗಳ ವಿವಾದದಿಂದಾಗಿ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗಗಳ ನಡುವಿನ ಭಿನ್ನಾಭಿಪ್ರಾಯದ ಅಂತರ ಮತ್ತಷ್ಟು ಉಲ್ಬಣಗೊಂಡಿದ್ದು, ಈ ನಿಟ್ಟಿನಲ್ಲಿ ಇದಕ್ಕೆ ಕಡಿವಾಣ ಹಾಕಲು ಆಯೋಗ ಪ್ರಬಲ ಕಾನೂನು ಅಸ್ತ್ರದ ಮೊರೆ ಹೋಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin