ಚುನಾವಣಾ ಖರ್ಚುವೆಚ್ಚದ ವಿವರ ಸಲ್ಲಿಸದ ಅಭ್ಯರ್ಥಿಗೆ ನಿರ್ಬಂಧ..?

ಈ ಸುದ್ದಿಯನ್ನು ಶೇರ್ ಮಾಡಿ

Poli--01

ಬೆಂಗಳೂರು,ಜ.4-ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಖರ್ಚು ವೆಚ್ಚದ ವಿವರಗಳನ್ನು ನೀಡದಿರುವ ಅಭ್ಯರ್ಥಿಗಳಿಗೆ ಬರಲಿರುವ ಚುನಾವಣೆಯಲ್ಲಿ ನಿರ್ಬಂಧ ಹಾಕಲು ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 547 ಅಭ್ಯರ್ಥಿಗಳು ಈವರೆಗೂ ತಾವು ಮಾಡಿರುವ ಖರ್ಚು ವೆಚ್ಚದ ವಿವರಗಳನ್ನು ಸಲ್ಲಿಸಿಲ್ಲ. ಯಾರು ವಿವರ ನೀಡಿಲ್ಲವೋ ಅಂಥವರನ್ನು ಪುನಃ ಚುನಾವಣೆಗೆ ಸ್ಪರ್ಧಿಸಿದಂತೆ ತಡೆಹಿಡಿಯಲು ಆಯೋಗ ಮುಂದಾಗಿದೆ.

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಫಲಿತಾಂಶ ಪ್ರಕಟಗೊಂಡ 30 ದಿನಗಳ ನಂತರ ತಾವು ಮಾಡಿರುವ ಖರ್ಚು ವೆಚ್ಚದ ಪೂರ್ಣ ವಿವರಗಳನ್ನು ಲಿಖಿತ ರೂಪದಲ್ಲಿ ಆಯೋಗಕ್ಕೆ ಸಲ್ಲಿಸಬೇಕೆಂಬ ನಿಯಮವಿದೆ. 1951ರ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 10ರ ಪ್ರಕಾರ ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಿಂದ ಗ್ರಾಮ ಪಂಚಾಯ್ತಿ ಚುನಾವಣೆವರೆಗೂ ಖರ್ಚಿನ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕಾಗುತ್ತದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ 28 ಲಕ್ಷದವರೆಗೆ ಖರ್ಚು ಮಾಡಲು ಆಯೋಗ ಮಿತಿ ಹಾಕಿತ್ತು. ಒಟ್ಟು ಮೂರು ಸಾವಿರ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಚುನಾವಣೆ ಮುಗಿದು ಇನ್ನೇನು ಐದು ವರ್ಷ ಪೂರ್ಣಗೊಂಡು ಹೊಸ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ 547 ಅಭ್ಯರ್ಥಿಗಳು ಆಯೋಗಕ್ಕೆ ಮಾಹಿತಿಯನ್ನೇ ನೀಡಿಲ್ಲ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಇಂತಹ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಹಿಡಿಯಬೇಕೆ ಇಲ್ಲವೇ ಅವರನ್ನು ಅನರ್ಹರೆಂಬ ಪಟ್ಟಿಗೆ ಸೇರಿಸುವುದರ ಬಗ್ಗೆ ಚಿಂತನೆ ನಡೆಸಿದೆ.
ಸದ್ಯದಲ್ಲೇ ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ಸೇರಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪದೇ ಪದೇ ನಿಯಮಗಳನ್ನು ಉಲ್ಲಂಘನೆ ಮಾಡುವ ಅಭ್ಯರ್ಥಿಗಳು ಸ್ಪಧಿಸದಂತೆ ತಡೆಹಿಡಿಯುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಆಯೋಗ ಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin