ಚುನಾವಣಾ ರಾಜಕೀಯದಿಂದ ದೂರ ಸರಿದ ಮಾಜಿ ಸಿಎಂ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಮೈಸೂರು, ಜೂ.12-ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಆದರೆ ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಮಕೃಷ್ಣ ನಗರದ ತಮ್ಮ ನಿವಾಸದ ಬಳಿ ಸಿದ್ದರಾಮಯ್ಯ ಇಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿ, ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಜನರು ತೀರ್ಪು ನೀಡಿದ್ದಾರೆ. ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಆದ್ದರಿಂದ ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸಲೇಬೇಕು ಎಂದು ಹೇಳಿದರು.

ಅತೃಪ್ತರ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಯಾರೂ ಅತೃಪ್ತರಿಲ್ಲ, ಎಲ್ಲರೂ ತೃಪ್ತರಾಗಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭ್ರಷ್ಟಾಚಾರದ ಬಗ್ಗೆ ಭಯವಾಗುತ್ತಿದೆ ಎಂದು ಹೇಳಿದ್ದಾರಲ್ಲ ಎಂದಾಗ, ನನಗಂತೂ ವಿಧಾನಸೌಧದಲ್ಲಿ ಭ್ರಷ್ಟಾಚಾರ ಕಂಡಿಲ್ಲ. ಕುಮಾರಸ್ವಾಮಿ ಅವರಿಗೆ ಕಂಡರೆ ನಿಯಂತ್ರಣ ಮಾಡಲಿ. ಮುಖ್ಯಮಂತ್ರಿ ಅವರು ಹೇಳಿದ ಭ್ರಷ್ಟಾಚಾರದ ವಿಚಾರ ನನ್ನ ಕಣ್ಣಿಗೆ ಬಿದ್ದಿಲ್ಲ. ಇದ್ದರೆ ಅವರು ನಿಲ್ಲಿಸಲಿ ಅವರಿಗೆ ಅಧಿಕಾರ ಇದೆ ಎಂದರು. ಅತೃಪ್ತರು ನಮ್ಮ ಜೊತೆ ಇದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಅವರ ಮಾತಿಗೆ ಕವಡೇ ಕಾಸಿನ ಕಿಮ್ಮತ್ತಿಲ್ಲ ಎಂದರು.

ಬಿಜೆಪಿಯವರು ಇತ್ತೀಚೆಗೆ ನಿಮ್ಮ ಬಗ್ಗೆ ಒಲವು ತೋರಿದ್ದಾರಲ್ಲ ಎಂದಾಗ, ಕರ್ನಾಟಕದ ಎಲ್ಲಾ ಜನರು ನನ್ನನ್ನು ಪ್ರೀತಿಸುತ್ತಾರೆ. ಬಿಜೆಪಿ ಅವರು ಕರುಣೆ ತೋರಿಸಿದ್ದಾರೆ. ಅವರಿಗೂ ನನ್ನ ಥ್ಯಾಂಕ್ಸ್ ಎಂದು ಹೇಳಿದರು. ಚಾಮುಂಡೇಶ್ವರಿ ಕ್ಷೇತ್ರದ ಜನ ಈಗಾಗಲೇ ತೀರ್ಪು ನೀಡಿದ್ದಾರೆ. ಜನರ ತೀರ್ಪನ್ನು ನಾನು ಗೌರವಿಸುತ್ತೇನೆ. ಈ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ ಎಂದರು. ವರುಣಾ ಕ್ಷೇತ್ರದ ಜನತೆ ನನ್ನ ಮಗ ಡಾ.ಯತೀಂದ್ರನನ್ನು ಗೆಲ್ಲಿಸಿದ್ದಾರೆ. ಅವರಿಗೆ ನನ್ನ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin