ಚುನಾವಣಾ ಲಾಭಕ್ಕಾಗಿ ಪ್ರತ್ಯೇಕ ನಾಡಧ್ವಜ ರಚಿಸಿದ್ದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ..!

ಈ ಸುದ್ದಿಯನ್ನು ಶೇರ್ ಮಾಡಿ

Karnataka-Flag--Kannada-Fla

ಬೆಂಗಳೂರು, ಮಾ.11- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಪ್ರತ್ಯೇಕ ನಾಡ ಧ್ವಜ ರಚಿಸುವ ಮೂಲಕ ಕನ್ನಡಿಗರ ಅಸ್ಮಿತೆ ಬಳಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯುಂಟಾಗಿದೆ. ದೇಶದಲ್ಲೇ ಪ್ರತ್ಯೇಕ ನಾಡಧ್ವಜ ಹೊಂದಬೇಕೆಂಬ ಕರ್ನಾಟಕದ ಆಸೆಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ. ದೇಶದ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿದರೆ ಪ್ರತ್ಯೇಕ ಧ್ವಜವನ್ನು ಯಾವುದೇ ರಾಜ್ಯಕ್ಕೆ ಮನ್ನಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಕೇದ್ರದ ಈ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಇನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸುವ ಮುನ್ನವೇ ನಾವು ಯಾವುದೇ ರಾಜ್ಯಕ್ಕೂ ಪ್ರತ್ಯೇಕ ಧ್ವಜವನ್ನು ಮನ್ನಣೆ ಮಾಡುವುದಿಲ್ಲ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಸಂವಿಧಾನದ 370ನೇ ವಿಧಿಯ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ದೇಶದಲ್ಲೇ ಪ್ರತ್ಯೇಕ ನಾಡಧ್ವಜವನ್ನು ನೀಡಲಾಗಿದೆ. ಅದನ್ನು ಹೊರತುಪಡಿಸಿದರೆ ಉಳಿದ ಯಾವುದೇ ರಾಜ್ಯಗಳೂ ಜಿಲ್ಲೆ, ಗ್ರಾಮ ಪ್ರತ್ಯೇಕ ಧ್ವಜವನ್ನು ಹೊಂದುವಂತಿಲ್ಲ ಎಂಬುದು ಸಂವಿಧಾನದಲ್ಲೇ ಉಲ್ಲೇಖವಾಗಿರುವಾಗ ಕರ್ನಾಟಕಕ್ಕೆ ನಾವು ಹೇಗೆ ನಾಡಧ್ವಜವನ್ನು ಅಂಗೀಕರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣವನ್ನು ನಾವು ರಾಷ್ಟ್ರಧ್ವಜವನ್ನಾಗಿ ಸಂವಿಧಾನ ರಚನೆಯಾದಾಗಲೇ ಒಪ್ಪಿಕೊಂಡಿದ್ದೇವೆ. ವಿಶೇಷ ಸಂದರ್ಭದಲ್ಲಿ ಕೆಲವು ರಾಜ್ಯಗಳು ನಾಡ ಧ್ವಜವನ್ನು ಹಾರಿಸಲು ಅವಕಾಶವಿದೆ. ರಾಷ್ಟ್ರಧ್ವಜಕ್ಕಿಂತ ಕೆಳಮಟ್ಟದಲ್ಲಿ ನಾಡಧ್ವಜವನ್ನು ಹಾರಿಸಬೇಕು. ಆದರೂ ಇದಕ್ಕೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಕರ್ನಾಟಕಕ್ಕೆ ನಾವು ಪ್ರತ್ಯೇಕ ಧ್ವಜವನ್ನು ಮಾನ್ಯ ಮಾಡಿದರೆ ನಾಳೆ ಎಲ್ಲಾ ರಾಜ್ಯಗಳು ಇದೇ ರೀತಿ ನಮ್ಮ ರಾಜ್ಯಕ್ಕೂ ಪ್ರತ್ಯೇಕ ಧ್ವಜ ನೀಡುವಂತೆ ಬೇಡಿಕೆ ಮುಂದಿಡುತ್ತಾರೆ. ಧ್ವಜ ಸಂಹಿತೆ ಹಾಗೂ ಭಾರತದ ರಾಜ್ಯ ಲಾಂಛನ ನಿಯಮ (ಬೇಕಾಬಿಟ್ಟಿ ಬಳಕೆಗೆ ನಿರ್ಧಾರ)ಕಾಯ್ದೆಯಲ್ಲಿ ಕೇವಲ ತ್ರಿವರ್ಣ ಧ್ವಜದ ಬಗ್ಗೆ ಮಾತ್ರ ಉಲ್ಲೇಖವಿದೆ. ನಾಡಧ್ವಜದ ಬಗ್ಗೆ ಎಲ್ಲಿಯೂ ಇಲ್ಲ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.

ಕಳೆದ 4 ದಿನಗಳ ಹಿಂದೆಯಷ್ಟೇ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ರಾಜ್ಯ ಸರ್ಕಾರಕ್ಕೆ ಕೆಂಪು, ಬಿಳಿ ಹಾಗೂ ಹಳದಿ ಬಣ್ಣದ ಧ್ವಜವನ್ನು ನಾಡಧ್ವಜವನ್ನಾಗಿ ಮಾಡುವಂತೆ ಶಿಫಾರಸು ಮಾಡಿತು. ಕರ್ನಾಟಕ ಏಕೀಕರಣವಾದ ನಂತರ ಕನ್ನಡ ರಾಜ್ಯೋತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ಕೆಂಪು, ಹಳದಿ ಮಿಶ್ರಿತ ಧ್ವಜವನ್ನು ನಾಡಧ್ವಜವನ್ನಾಗಿ ಹಾರಿಸಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಪ್ರತ್ಯೇಕ ನಾಡಧ್ವಜಕ್ಕೆ ಮಾನ್ಯತೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ರಾಜ್ಯ ಸರ್ಕಾರ ಮುಂದೆ ತೆಗೆದುಕೊಳ್ಳುವ ನಿಲುವು ಏನೆಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Facebook Comments

Sri Raghav

Admin