ಚುನಾವಣಾ ಹಬ್ಬಕ್ಕೆ ಆಯೋಗ ಸಕಲ ಸಿದ್ಧತೆ, ಭದ್ರತಾ ಸಿಬ್ಬಂದಿ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Election
ಬೆಂಗಳೂರು, ಮೇ 10- ರಾಜ್ಯ ವಿಧಾನಸಭೆಗೆ ಇದೇ 12 ರಂದು ಚುನಾವಣೆ ನಡೆಸಲು ಆಯೋಗ ಸಜ್ಜಾಗಿದ್ದು, ಮತದಾನಕ್ಕೆ ರಾಜ್ಯಾದ್ಯಂತ 56,696 ಮತಗಟ್ಟೆಗಳನ್ನು ನಿರ್ಮಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ 1595, ಬೆಳಗಾವಿಯಲ್ಲಿ 891, ಮೈಸೂರು-632 ಸೇರಿದಂತೆ ಜಯನಗರ ಹೊರತುಪಡಿಸಿ 223 ಕ್ಷೇತ್ರಗಳಲ್ಲಿ 12,008 ಕ್ರಿಟಿಕಲ್ ಪೋಲಿಂಗ್ ಸ್ಟೇಷನ್‍ಗಳೆಂದು ಗುರುತಿಸಲಾಗಿದೆ.

ಮುಕ್ತ ಮತ್ತು ಶಾಂತಿಯುತವಾಗಿ ಚುನಾವಣೆ ನಡೆಸಲು ಕ್ರಿಟಿಕಲ್ ಪೋಲಿಂಗ್ ಸ್ಟೇಷನ್‍ಗೆ ಹೆಡ್‍ಕಾನ್‍ಸ್ಟೆಬಲ್, ಕಾನ್‍ಸ್ಟೆಬಲ್‍ವೊಬ್ಬರನ್ನು, ಸೂಕ್ಷ್ಮ ಮತಗಟ್ಟೆಗೆ ಕಾನ್‍ಸ್ಟೆಬಲ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ, ಸಾಮಾನ್ಯ ಮತಗಟ್ಟೆಗೆ ಒಬ್ಬರು ಕಾನ್‍ಸ್ಟೆಬಲ್‍ನ್ನು ಭದ್ರತೆಗಾಗಿ ನಿಯೋಜಿಸಿದೆ. ಎಂಟರಿಂದ ಹತ್ತು ಮತಗಟ್ಟೆಗಳ ವ್ಯಾಪ್ತಿಗೆ ಅಧಿಕಾರಿಯೊಬ್ಬರನ್ನು ಉಸ್ತುವಾರಿಗೆ ನೇಮಿಸಲಾಗಿದೆ. ಸಬ್‍ಇನ್ಸ್‍ಪೆಕ್ಟರ್, ಇನ್ಸ್‍ಪೆಕ್ಟರ್, ಡಿವೈಎಸ್‍ಪಿಗಳು ಆಯಾ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.

ಸ್ಥಳೀಯ ಪೊಲೀಸರ ಜೊತೆಗೆ ಕೇಂದ್ರ ಪಡೆಗಳು ಮತ್ತು ನೆರೆಹೊರೆ ರಾಜ್ಯದ ಪೊಲೀಸರೂ ಸಹ ಚುನಾವಣಾ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳು ಗಸ್ತಿನಲ್ಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಿದ್ದಾರೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿ ನಾಳೆ ಆಯಾ ವಿಧಾನಸಭಾ ಕೇಂದ್ರಗಳಲ್ಲಿ ಸಮಾವೇಶಗೊಂಡು ಚುನಾವಣಾ ಪರಿಕರಗಳೊಂದಿಗೆ ಮತಗಟ್ಟೆಗೆ ತೆರಳಲಿದ್ದಾರೆ. ಇದಕ್ಕಾಗಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಬಸ್‍ಗಳು ಸಿದ್ಧವಾಗಿವೆ. ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ ಸೇರಿದಂತೆ ಐವರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.   ಪುರುಷರು, ಮಹಿಳೆಯರು, ಸೇವಾ ಮತದಾರರು ಹಾಗೂ ಇತರೆ ಸೇರಿ ಒಟ್ಟು ಐದು ಕೋಟಿಗೂ ಹೆಚ್ಚು ಮತದಾರರಿದ್ದಾರೆ.

ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಬಾರಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಜೊತೆ ವಿವಿ ಪ್ಯಾಟ್‍ಗಳಿರುವುದರಿಂದ ನಾವು ಮತದಾನ ಯಾರಿಗೆ ಮಾಡಿದ್ದೇವೆ ಎಂಬುದನ್ನು ಖಚಿತಪಡಿಸಿ ಕೊಳ್ಳಬಹುದಾಗಿದೆ. ಮಲೆನಾಡು, ಕರಾವಳಿ, ನಕ್ಸಲ್ ಭೀತಿ ಇರುವ ಪ್ರದೇಶಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಕೋಮುಗಲಭೆ ಉಂಟಾಗುವ ಪ್ರದೇಶಗಳಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.  ಹೈವೋಲ್ಟೇಜ್ ಕ್ಷೇತ್ರಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಚುನಾವಣಾ ಅಕ್ರಮ, ಸಂಭಾವ್ಯ ಅಹಿತಕರ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ಮತಗಟ್ಟೆ ಸಮೀಪವೇ ಸಿಗಲಿದೆ ಭಾವಚಿತ್ರವುಳ್ಳ ಮತದಾನದ ಚೀಟಿ :
ಬೆಂಗಳೂರು, ಮೇ 10- ಬಿಜೆಪಿ ಅಭ್ಯರ್ಥಿ ವಿಜಯ್‍ಕುಮಾರ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಬಿಬಿಎಂಪಿ ವ್ಯಾಪ್ತಿಯ 27 ಕ್ಷೇತ್ರಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಮೇ 12ರಂದು ಚುನಾವಣೆ ನಡೆಯಲಿರುವುದರಿಂದ ಇಂದು ಸಂಜೆ 5 ಗಂಟೆಯಿಂದ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ ಎಂದು ಅವರು ಹೇಳಿದರು.

ಇಂದು ಸಂಜೆ 5 ರಿಂದ ಮೇ 12ರ ಮಧ್ಯರಾತ್ರಿವರೆಗೂ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಹಾಗೂ ಮತ ಎಣಿಕೆ ದಿನ ಬೆಳಗ್ಗೆ 7ರಿಂದ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ವಿವರಿಸಿದರು. ಇಂದು ಸಂಜೆ 7 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಸಂಜೆ 7ರ ನಂತರ 5ಕ್ಕೂ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ. ಆದರೆ, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ ಎಂದರು. ಮತದಾರರಲ್ಲದವರು ಇಂದು ಸಂಜೆ 7 ಗಂಟೆ ನಂತರ ಕ್ಷೇತ್ರ ಬಿಟ್ಟು ತೆರಳಬೇಕು. ಮತಗಟ್ಟೆಯ 3 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಪ್ರಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

ಎಡಗೈ ತೋರು ಬೆರಳಿಗೆ ಶಾಯಿ:
ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರ ಎಡಗೈ ತೋರು ಬೆರಳಿಗೆ ಶಾಯಿ ಬಳಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ಸ್ಥಳದಲ್ಲೇ ಚೀಟಿ:
ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿರುವ ಮತದಾರರಿಗೆ ಈಗಾಗಲೇ ಭಾವಚಿತ್ರವುಳ್ಳ ಮತದಾನ ಚೀಟಿಯನ್ನು ವಿತರಿಸಲಾಗಿದೆ. ಒಂದು ವೇಳೆ ಮತದಾನ ಚೀಟಿ ದೊರೆಯದಿರುವವರು ಮತಗಟ್ಟೆ ಸಮೀಪ ಆಯೋಗದಿಂದ ಸ್ಥಾಪಿಸಲ್ಪಟ್ಟಿರುವ ವೋಟರ್ ಅಸಿಸ್ಟೆಂಟ್ ಬೂತ್‍ಗಳಲ್ಲಿ ವೋಟರ್ ಐಡಿ ಇಲ್ಲವೆ 11 ದಾಖಲಾತಿಗಳನ್ನು ತೋರಿಸಿ ಸ್ಥಳದಲ್ಲೇ ಮತದಾನ ಚೀಟಿ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಚೀಟಿ ದೊರೆಯದಿರುವ ಮತದಾರರು ಯಾವುದೇ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಅವರು ಅಭಯ ನೀಡಿದರು.

ಕ್ರಿಮಿನಲ್ ಕೇಸ್:
ನಾಳೆ ಮಧ್ಯಾಹ್ನ 1.30ರೊಳಗೆ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೆಲಸ ಪೂರ್ಣಗೊಳಿಸಲಾಗುವುದು. ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಅಧಿಕಾರಿಗಳು 1.35ರೊಳಗೆ ಕರ್ತವ್ಯಕ್ಕೆ ಹಾಜರಾಗಲೇಬೇಕು. ಆನಂತರ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹೇಶ್ವರರಾವ್ ಎಚ್ಚರಿಸಿದರು.

100 ಪಿಂಕ್ ಮತಗಟ್ಟೆ:
ಮಹಿಳೆಯರು ತಮ್ಮ ಹಕ್ಕು ಚಲಾಯಿಸಲು ಮುಂದೆ ಬರಬೇಕೆಂಬ ಉದ್ದೇಶದಿಂದ ನಗರದಲ್ಲಿ 100 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು. ಪಿಂಕ್ ಮತಗಟ್ಟೆಗಳೆಂದರೆ ಕೇವಲ ಮಹಿಳೆಯರು ಮಾತ್ರ ಮತ ಚಲಾಯಿಸಲು ಅವಕಾಶ ಕಲ್ಪಿಸುವುದಲ್ಲ. ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ ಗುಲಾಬಿ ಬಣ್ಣದ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಆ ಮತಗಟ್ಟೆಗಳಲ್ಲಿ ಯಾರು ಬೇಕಾದರೂ ಮತ ಚಲಾಯಿಸಬಹುದು. ವಿಕಲಚೇತನರು ಮತ ಚಲಾಯಿಸಲು ಅನುಕೂಲವಾಗುವಂತೆ ವೀಲ್‍ಚೇರ್, ಬ್ರೈಲ್ ಲಿಪಿ ಮತ್ತು ವಾಹನ ವ್ಯವಸ್ಥೆ ಮಾಡಲು ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಪ್ರಕರಣ ದಾಖಲು: ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಇದುವರೆಗೂ 6.8 ಕೋಟಿ ನಗದು ವಶ, 5.29 ಕೋಟಿ ಮೌಲ್ಯದ 11,699 ಲೀಟರ್ ಮದ್ಯ ವಶ, 39,540 ಪ್ರಕರಣಗಳಲ್ಲಿ 17.43 ಕೋಟಿ ಸೇರಿದಂತೆ ಇದುವರೆಗೂ 31.55 ಕೋಟಿ ರೂ.ಗಳನ್ನು ಎಂಸಿಸಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ನಿರ್ಬಂಧ:
ಮತದಾನದ ದಿನ ಅಭ್ಯರ್ಥಿಗಳ ಪರ ದೂರದರ್ಶನ ಇಲ್ಲವೆ ಮುದ್ರಣ ಮಾಧ್ಯಮಗಳಲ್ಲಿ ಬೈಟ್ ಪ್ರಸಾರ ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಕಾನೂನು ಉಲ್ಲಂಘಿಸುವ ಮಾಧ್ಯಮಗಳ ಮೇಲೂ ಕೇಸು ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದರು. ಮೂರು ವಾಹನಗಳಿಗೆ ಮಾತ್ರ ಅನುಮತಿ: ಮತದಾನದ ದಿನ ಅಭ್ಯರ್ಥಿ, ಏಜೆಂಟರುಗಳು ಸೇರಿ ಕೇವಲ ಮೂರು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಅನುಮತಿ ನೀಡಿರುವ ಕಾರಿನಲ್ಲಿ ಬೇರೆಯವರ ವೋಟರ್ ಐಡಿ ಕಾರ್ಡ್ ತೆಗೆದುಕೊಂಡು ಹೋಗುವಂತಿಲ್ಲ. ಮತಕೇಂದ್ರದಲ್ಲಿ ಚುನಾವಣಾಧಿಕಾರಿಗಳಿಗೆ ಮಾತ್ರ ಮೊಬೈಲ್ ಬಳಸಲು ಅವಕಾಶ ನೀಡಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಹೊರಗಿನಿಂದ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು 81 ಚೆಕ್‍ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin