ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಖಾಸಗಿ ಸಂಸ್ಥೆಯಿಂದ ಸರ್ವೆ

ಈ ಸುದ್ದಿಯನ್ನು ಶೇರ್ ಮಾಡಿ

Congress0-2

ಬೆಂಗಳೂರು, ಡಿ.16- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರಕ್ಕೆ ಬರಲು ಕಾರ್ಯತಂತ್ರ ರೂಪಿಸುತ್ತಿರುವ ಕೆಪಿಸಿಸಿ, ಖಾಸಗಿ ಸಂಸ್ಥೆಯೊಂದರ ಮೂಲಕ ರಾಜ್ಯದಾದ್ಯಂತ ಸರ್ವೇ ಕಾರ್ಯ ನಡೆಸಲು ತೀರ್ಮಾನಿಸಿದೆ. ಈ ರೀತಿ ಸರ್ವೆ ನಡೆಸಿ ಗೆಲ್ಲುವ ಅಭ್ಯರ್ಥಿಗಳು ಯಾರು ಎಂಬ ಪಟ್ಟಿಯನ್ನು ತರಿಸಿಕೊಳಳಲು ಕೆಪಿಸಿಸಿ ನಿರ್ಧರಿಸಿದ್ದು ಪ್ರತಿ ಕ್ಷೇತ್ರದಲ್ಲಿ ಗೆಲ್ಲುವ ಶಕ್ತಿ ಹೊಂದಿರುವ ತಲಾ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ನೀಡುವಂತೆ ಖಾಸಗಿ ಸಂಸ್ಥೆಗೆ ಸೂಚಿಸಿದೆ.

ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಜನವರಿ ಮಧ್ಯ ಭಾಗದಲ್ಲಿ ಖಾಸಗಿ ಸಂಸ್ಥೆ ತನ್ನ ಸರ್ವೆ ಕಾರ್ಯ ಆರಂಭಿಸುವ ಮುನ್ನ ಹಾಲಿ ಶಾಸಕರ ಪೈಕಿ ಇಪ್ಪತ್ತು ಮಂದಿಗೆ ರೆಡ್ ಸಿಗ್ನಲ್ ರವಾನಿಸಿದೆ ಎಂದು ಹೇಳಿವೆ. ನಿಮ್ಮ ಕ್ಷೇತ್ರದಲ್ಲಿ ನೀವು ಗೆಲ್ಲುವ ಸಂಭವ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳಿ.ಜನರ ಮನಸ್ಸಿಗೆ ಅಗತ್ಯವಾದ ಕಾರ್ಯತಂತ್ರವನ್ನು ರೂಪಿಸಿ ಇನ್ನೊಂದು ತಿಂಗಳ ಒಳಗಾಗಿ ಜನಾಭಿಪ್ರಾಯ ನಿಮ್ಮ ಪರವಾಗಿರುವಂತೆ ನೋಡಿಕೊಳ್ಳಿ.ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮ್ಮ ಬದಲು ಬೇರೆಯರಿಗೆ ಟಿಕೇಟ್ ಸಿಗಬಹುದು ಎಂದು ಸ್ಪಷ್ಟ ಪಡಿಸಿದೆ.

ಈ ಕಾರ್ಯಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಹೈಕಮಾಂಡ್ ನೇತಾರ ರಾಹುಲ್ ಗಾಂಧಿಯವರಿಂದ ಗ್ರೀನ್ ಸಿಗ್ನಲ್ ಪಡೆದಿದ್ದಾರೆ ಎಂದು ಮೂಲಗಳು ಸ್ಪಷ್ಟ ಪಡಿಸಿವೆ. ಸತತ ಎರಡು ತಿಂಗಳ ಕಾಲ ಈ ಸರ್ವೆ ಕಾರ್ಯ ನಡೆಯಲಿದ್ದು, ತದ ನಂತರ ಖಾಸಗಿ ಸಂಸ್ಥೆ ನೀಡುವ ಸಮೀಕ್ಷೆಯ ವರದಿ ಮತ್ತು ಗೆಲ್ಲಬಲ್ಲ ಮೂರು ಅಭ್ಯರ್ಥಿಗಳ ಹೆಸರನ್ನು ಕೆಪಿಸಿಸಿ ಕಣ್ಣ ಮುಂದಿಟ್ಟುಕೊಂಡು ಮುಂದಿನ ಹೆಜ್ಜೆ ಇಡಲಿದೆ.

ಈ ಮಧ್ಯೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಕೆಪಿಸಿಸಿ ವತಿಯಿಂದ ವೀಕ್ಷಕರನ್ನು ನೇಮಕ ಮಾಡಲಿದ್ದು ಸದರಿ ವೀಕ್ಷಕರು ಕೂಡಾ ಆಯಾ ಕ್ಷೇತ್ರದಲ್ಲಿ ಸಂಚರಿಸಿ ತಮ್ಮ ಗಮನಕ್ಕೆ ಬಂದ ಅಂಶಗಳು, ಪಕ್ಷದ ಪರಿಸ್ಥಿತಿ, ಗೆಲ್ಲುವ ಕ್ಯಾಂಡಿಡೇಟ್‍ಗಳು ಯಾರು ಎಂಬ ಕುರಿತು ತಮ್ಮದೆ ಪ್ರತ್ಯೇಕ ವರದಿ ನೀಡಲಿದ್ದಾರೆ. ಸದರಿ ವರದಿ ಹಾಗೂ ಖಾಸಗಿ ಸಂಸ್ಥೆ ನೀಡುವ ವರದಿಯನ್ನು ಕಣ್ಣ ಮುಂದಿಟ್ಟುಕೊಂಡು ಅಂತಿಮ ಪಟ್ಟಿಯನ್ನು ಪಕ್ಷ ತಯಾರಿಸಲಿದ್ದು, ಈ ಬೆಳವಣಿಗೆ ಮುಂದಿನ ಚುನಾವಣೆಯ ಕಾವು ಹೆಚ್ಚುವ ಮುನ್ಸೂಚನೆಯಂತಿದೆ.

Facebook Comments

Sri Raghav

Admin