ಚುನಾವಣೆಗೆ ಜೆಡಿಎಸ್ ಸೈಲೆಂಟಾಗಿ ಸಿದ್ದತೆ, ಗೌಪ್ಯ ಪ್ರಚಾರಕ್ಕೆ ಗೌಡರ ಸೂಚನೆ
ಬೆಂಗಳೂರು, ಆ.16-ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರ ಹಿಡಿಯಬೇಕೆಂಬ ಮಹದಾಸೆ ಹೊಂದಿರುವ ಜೆಡಿಎಸ್ ವರಿಷ್ಠರು ಸದ್ದು ಗದ್ದಲವಿಲ್ಲದೆ ಚುನಾವಣೆ ಸಿದ್ಧತೆಯನ್ನು ತೀವ್ರಗೊಳಿಸುವಂತೆ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ. ಸದ್ಯಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಿಲ್ಲ. ಆದರೆ ಕಣಕ್ಕಿಳಿಸುವ ಅಭ್ಯರ್ಥಿಗಳಿಗೆ ಚುನಾವಣೆ ಸಿದ್ಧತೆಯಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಗೌಪ್ಯವಾಗಿ ಪಕ್ಷ ಸಂಘಟನೆ ಹಾಗೂ ಚುನಾವಣಾ ತಯಾರಿ ಮಾಡಿಕೊಳ್ಳುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ನಿರ್ದೇಶನ ನೀಡಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಸ್ವಲ್ಪ ಎಚ್ಚರ ತಪ್ಪಿದರೂ ನಮಗೆ ತೊಂದರೆ ಉಂಟಾಗುತ್ತದೆ. ಹೀಗಾಗಿ ಮಾಡುವ ಕೆಲಸದ ಬಗ್ಗೆ ಪ್ರಚಾರದ ಹಿಂದೆ ಬೀಳದೆ ಗೌಪ್ಯವಾಗಿ ಮಾಡಬೇಕೆಂದು ಗೌಡರು ಮುಖಂಡರ ಕಿವಿ ಹಿಂಡಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪಟ್ಟಿ ಪ್ರಕಟಿಸದಿರುವಾಗ ನಮ್ಮ ಪಕ್ಷದಿಂದ ಪಟ್ಟಿ ಪ್ರಕಟಿಸಿದರೆ ಆಗುವ ಲಾಭಕ್ಕಿಂತ ಹಾನಿಯೇ ಹೆಚ್ಚು. ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಸಿಗದಿರುವುದು ಖಾತ್ರಿಯಾದ ಕೂಡಲೇ ಬೇರೆ ಪಕ್ಷದೆಡೆಗೆ ವಾಲಬಹುದು. ಅಲ್ಲದೆ ಪಕ್ಷದ ಸಂಘಟನೆಗೂ ಅಡ್ಡಿಯಾಗಬಹುದು. ಈ ಕಾರಣಕ್ಕಾಗಿ ಪಟ್ಟಿ ಪ್ರಕಟಿಸದಿರುವುದೇ ಸೂಕ್ತ. ಈಗಾಗಲೇ ಮೊದಲ ಹಂತದ ಪಟ್ಟಿ ಸಿದ್ಧವಿದ್ದರೂ ಪ್ರಕಟಿಸುವುದು ಬೇಡ. ಸಂಘಟನೆಗೆ ಹೆಚ್ಚು ಆದ್ಯತೆ ನೀಡಿ ಎಂದು ಗೌಡರು ಸೂಚಿಸಿದ್ದಾರೆ.
ಸಮಾವೇಶ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯದೆ ಕಳಸಾ ಬಂಡೂರಿ ಯೋಜನೆ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ಉದ್ದೇಶಿಸಿದೆ. ಬೆಳಗಾವಿಯಿಂದ ಹುಬ್ಬಳ್ಳಿಯವರೆಗೂ ರ್ಯಾಲಿ ನಡೆಸಿ ಮಹದಾಯಿ ವಿಚಾರದಲ್ಲಿ ಜನಜಾಗೃತಿ ಮೂಡಿಸುವುದು. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸುವ ಉದ್ದೇಶವನ್ನು ಜೆಡಿಎಸ್ ಹೊಂದಿದೆ. ಇದಲ್ಲದೆ, ಉತ್ತರ ಕರ್ನಾಟಕ ಭಾಗದ ಕಲಬುರಗಿ ಅಥವಾ ರಾಯಚೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ.
ಮೈಸೂರಿನಲ್ಲಿ ಹಿಂದುಳಿದ ವರ್ಗದ ಸಮಾವೇಶ ನಡೆಸಲು ನಿರ್ಧರಿಸಿದ್ದು, ಚಿತ್ರದುರ್ಗದಲ್ಲಿ ಎಸ್ಸಿ ಸಮಾವೇಶ ನಡೆಸಲಾಗುತ್ತದೆ. ಈ ಎಲ್ಲಾ ಸಮಾವೇಶಗಳು ಮುಂದಿನ ಎರಡು ತಿಂಗಳೊಳಗೆ ನಡೆಯುತ್ತವೆ ಎಂದು ಜೆಡಿಎಸ್ನ ವಿಶ್ವಸನೀಯ ಮೂಲಗಳು ತಿಳಿಸಿವೆ.