ಚುನಾವಣೆಗೆ 10 ತಿಂಗಳು ಬಾಕಿ, ರಂಗೇರುತ್ತಿದೆ ರಾಜ್ಯ ರಾಜಕೀಯ

ಈ ಸುದ್ದಿಯನ್ನು ಶೇರ್ ಮಾಡಿ

Politics-Parties

– ಕೆ.ಎಸ್.ಜನಾರ್ದನ್
ಬೆಂಗಳೂರು, ಜು.13- ಬಹುತೇಕ ಎಲ್ಲ ಶಾಸಕರು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ವಿಧಾನಸಭೆ ಚುನಾವಣೆ 10 ತಿಂಗಳು ಬಾಕಿ ಇರುವಂತೆಯೇ ಎಲ್ಲ ಕ್ಷೇತ್ರಗಳಲ್ಲೂ ಚುನಾವಣಾ ವಾತಾವರಣ ಕಂಡುಬರುತ್ತಿದೆ.ಚುನಾವಣೆ ಘೋಷಣೆಗೂ ಮುನ್ನ ಅಖಾಡ ರಂಗೇರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತವರ ತಂಡಗಳು ಭಾರೀ ಪ್ರಚಾರವನ್ನು ಈಗಾಗಲೇ ಶುರುವಿಟ್ಟುಕೊಂಡಿದ್ದಾರೆ.

ಸಂಪೂರ್ಣ ಮುಗಿಯದ ಕಾಮಗಾರಿಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಇನ್ನೂ ಹಲವೆಡೆ ಭರದಿಂದ ಶಂಕುಸ್ಥಾಪನೆಗಳು, ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ಕ್ಷೇತ್ರಗಳನ್ನು ತೊರೆದು ರಾಜಧಾನಿಯಲ್ಲಿ ನೆಲೆಸಿದ್ದವರು ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿಡಾರ ಹೂಡಿದ್ದು, ತಮ್ಮ ಕ್ಷೇತ್ರದ ವಿವಿಧ ಜನರ, ಸಮುದಾಯದವರ, ಮುಖಂಡರ ಜತೆ ಮಾತುಕತೆ ನಡೆಸುತ್ತಿದ್ದಾರೆ, ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಮತ್ತೆ ಕೆಲವರು ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾವೇ ಬೆನ್ನು ತಟ್ಟಿಕೊಂಡು ಓಡಾಡುತ್ತಿದ್ದಾರೆ.

ಗೆದ್ದವರು ಅಂದರೆ ಹಾಲಿ ಶಾಸಕರು ತಮಗೆ ಟಿಕೆಟ್ ಸಿಗಲಿದೆ, ಮುಂದೆ ಚುನಾವಣೆಗೆ ಪಕ್ಷ ಸಂಘಟನೆ ಮಾಡಬೇಕು. ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು ಎಂಬ ವಿಶ್ವಾಸದಲ್ಲಿದ್ದರೆ ಅವರ ನ್ಯೂನ್ಯತೆಗಳನ್ನು ಎತ್ತಿ ಹಿಡಿದು ಅವರಿಗೆ ಟಿಕೆಟ್ ತಪ್ಪಿಸಿ ನಾವು ಟಿಕೆಟ್ ಪಡೆಯಬೇಕು ಎಂದು ಅದೇ ಪಕ್ಷಗಳ ಕೆಲವರು ತಂತ್ರ ರೂಪಿಸಿ ಹೋರಾಟ ಮಾಡುತ್ತಿದ್ದಾರೆ.
ವಿಪಕ್ಷಗಳವರು ಹೇಗಾದರೂ ಮುಂಬರುವ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕೆಂದು ಭೂಮಿಕೆ ಸಜ್ಜು ಮಾಡಿಕೊಳ್ಳತೊಡಗಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಈಗಾಗಲೇ ಬಹಿರಂಗ ಹಾಗೂ ವಿಭಾಗ ಮಟ್ಟದ ಸಭೆ-ಸಮಾರಂಭಗಳನ್ನು ಮಾಡತೊಡಗಿದ್ದಾರೆ.

ಅವಧಿಗೆ ಮುನ್ನವೇ ಚುನಾವಣೆ ಬರುವ ಸಾಧ್ಯತೆ ಕೂಡ ದಟ್ಟವಾಗತೊಡಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಉಸ್ತುವಾರಿಯಾದ ಕೆ.ಸಿ.ವೇಣುಗೋಪಾಲ್ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಾದ ನಾಲ್ವರ ತಂಡ ಈಗಾಗಲೇ ರಾಜ್ಯದಲ್ಲಿ ಬೀಡು ಬಿಟ್ಟು ನಾಲ್ಕು ಕಂದಾಯ ವಿಭಾಗಗಳಲ್ಲಿ ಪಕ್ಷದ ಸಂಘಟನೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ರಾಜ್ಯಾದ್ಯಂತ ಪ್ರವಾಸ ಮಾಡಿ ಒಂದೇ ಹಂತದ ವರದಿಯನ್ನು ಹೈಕಮಾಂಡ್‍ಗೆ ರವಾನಿಸಿದ್ದಾರೆ. ಬಿಜೆಪಿ ಪಕ್ಷದ ಮುಖಂಡರಾದ ಯಡಿಯೂರಪ್ಪ, ಈಶ್ವರಪ್ಪ, ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಈಗಾಗಲೇ ನಾಲ್ಕು ದಿಕ್ಕುಗಳಿಂದ ಪ್ರವಾಸ ಮಾಡಿ ರಾಜ್ಯ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.

ಜೆಡಿಎಸ್ ಪಕ್ಷ ಅಹರ್ನಿಶಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗಗಳಿಗೆ ಹೆಚ್ಚು ಒತ್ತು ನೀಡಿ ಪ್ರಚಾರ ಕಾರ್ಯ ನಡೆಸುತ್ತಿದೆ. ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ.

ಪಕ್ಷಾಂತರ ಪರ್ವ:

ಚುನಾವಣೆಗೆ 10 ತಿಂಗಳು ಬಾಕಿ ಇರುವಂತೆಯೇ ಪಕ್ಷಾಂತರ ಪರ್ವ ತೀವ್ರಗೊಂಡಿದೆ. ಪಕ್ಷ ಬಿಟ್ಟು ಹೊರ ಹೋಗುವವರು, ಬೇರೆ ಪಕ್ಷದಲ್ಲಿ ನೆಲೆ ಕಂಡುಕೊಳ್ಳುವವರು, ಟಿಕೆಟ್ ವಂಚಿತರು ಸೇರಿದಂತೆ ಅನೇಕರು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ.  ಈಗಾಗಲೇ ಕಾಂಗ್ರೆಸ್ ಹಿರಿಯ ಮುಖಂಡರಾದ ಎಸ್.ಎಂ.ಕೃಷ್ಣ, ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರ್ಪಡೆಯಾದರೆ ಇತ್ತೀಚೆಗೆ ಮತ್ತೊಬ್ಬ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ವಿಶ್ವನಾಥ್ ಅವರು ಜೆಡಿಎಸ್‍ಗೆ ಸೇರ್ಪಡೆಯಾದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಿಶ್ವ ಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಅವರು ಬಿಜೆಪಿಗೆ ಸೇರಿದರು. ಕೆಜೆಪಿ ಶಾಸಕರಾಗಿದ್ದ ಬಿ.ಆರ್.ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ, ಜೆಡಿಎಸ್‍ನಿಂದ ಬಂಡಾಯವಾಗಿರುವ ಜಮೀರ್ ಅಹಮ್ಮದ್, ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಏಳು ಜನ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣಕ್ಕಿಳಿಯುವುದಾಗಿ ಹೇಳುತ್ತಿದ್ದಾರೆ.   ಹಾಲಿ ಕಾಂಗ್ರೆಸ್‍ನಲ್ಲಿರುವ ಕೆಲವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದ್ದು, ಅವರು ಟಿಕೆಟ್‍ಗಾಗಿ ಬೇರೆ ಪಕ್ಷಗಳ ಕದ ತಟ್ಟುವ ಸಾಧ್ಯತೆ ಇದೆ.
ಬಿಜೆಪಿಯಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹೆಚ್ಚಿನ ಅವಕಾಶ ಸಿಗುವ ಅದರಲ್ಲೂ ಬೇರೆಡೆಯಿಂದ ಬಂದಿರುವ ದಲಿತ, ಹಿಂದುಳಿದವರಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ಹಾಗಾಗಿ ಆ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರು ಹೆಚ್ಚಾಗಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಾಂತರ ಪ್ರಕ್ರಿಯೆ ಹೆಚ್ಚಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin