ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸದಿದ್ದರೆ ರಾಜಕೀಯ ನಿವೃತ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Srinivas-Prasad-and-Siddara

ಮೈಸೂರು, ಅ.8- ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವುದೇ ನನ್ನ ಗುರಿ. ಇಲ್ಲವಾದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ ಇದಕ್ಕೆ ಮುಂದಿನ ದಿನಗಳಲ್ಲಿ ಜನರೇ
ತಕ್ಕ ಪಾಠ ಕಲಿಸುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.  ಯಾರು ಅವರ ವಿರುದ್ಧವಾಗಿ ಮಾತನಾಡುತ್ತಾರೋ ಅವರ ಮೇಲೆ ಹಗೆ ತೀರಿಸಿಕೊಳ್ಳಲು ಅಧಿಕಾರಿಗಳನ್ನು ಬಳಸಿಕೊಳ್ಳುತ್ತಾರೆ. ಅವರು ಪೊಲಿಟಿಕಲ್ ಕಿಲ್ಲರ್ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಅವರಿಗೆ ಬುದ್ಧಿ ಕಲಿಸಬೇಕೆಂಬುದೇ ನನ್ನ ಗುರಿಯಾಗಿದೆ. ನಿನ್ನೆ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲವರು ನನ್ನನ್ನು ಭೇಟಿ ಮಾಡಿದ್ದರು. ಅವರು ನನ್ನ ಸ್ನೇಹಿತರು, ಸಹಕಾರ ಕೇಳಿದ್ದಾರೆ. ಅದಕ್ಕೆ ನಾನು ಸಮ್ಮತಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ ನಂಜನಗೂಡು ಉಪಚುನಾವಣೆಯಲ್ಲಿ 44 ಸಾವಿರ ವೋಟಿಗಾಗಿ 44 ಕೋಟಿ ರೂ. ಖರ್ಚು ಮಾಡಿ ಗೆದ್ದಿದ್ದಾರೆ. ಮುಂದೆ ಅದು ಸಾಧ್ಯವಿಲ್ಲ. ನಮ್ಮ ಬಲ ಏನೆಂಬುದನ್ನು ತೋರಿಸುವ ಕಾಲ ಸನ್ನಿಹಿತವಾಗಿದೆ. ಈ ಉಪಚುನಾವಣೆಯನ್ನು ಜೆಡಿಎಸ್ ಸಹಾಯದಿಂದ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.
ನಾನು ಶೀಘ್ರದಲ್ಲೇ ಒಂದು ಪುಸ್ತಕ ಬರೆಯಲಿದ್ದು, ಅದರಲ್ಲಿ ಸಿದ್ದರಾಮಯ್ಯನವರ ಬಗ್ಗೆ ವಿಷದವಾಗಿ ದಾಖಲಿಸಲಿದ್ದೇನೆ.

ಸಿದ್ದರಾಮಯ್ಯ ಉಪಚುನಾವಣೆಗಳನ್ನು ಹೇಗೆ ಗೆದ್ದರು, ಅದಕ್ಕಾಗಿ ಏನೇನು ನಾಟಕವಾಡಿದರು, ನನ್ನನ್ನು ಮತ್ತು ವಿಶ್ವನಾಥ್‍ರನ್ನು ಹೇಗೆ ಬಳಸಿಕೊಂಡರು ಎಂಬುದನ್ನೆಲ್ಲ ಪುಸ್ತಕದಲ್ಲಿ ನಮೂದಿಸುತ್ತೇನೆ.  ನಾನು ಪಕ್ಷದಿಂದ ಹೊರಬಂದದ್ದು ವಿಷಯಾಧಾರಿತವಾಗಿ. ಆದರೆ, ವಿಶ್ವನಾಥ್ ಅವರು ಹೊರಬಂದಿದ್ದು ಆಂತರಿಕ ಕಲಹದಿಂದಾಗಿ. ಈ ಎಲ್ಲ ಅಂಶಗಳೂ ನನ್ನ ಪುಸ್ತಕದಲ್ಲಿ ದಾಖಲಾಗಲಿವೆ ಎಂದು ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin