ಚುನಾವಣೆ ಕಾರ್ಯಕ್ಕಾಗಿ ನಿರುದ್ಯೋಗಿಗಳ ನೇಮಕ ಮಾಡಿಕೊಳ್ಳುವಸಂತೆ ಆಯೋಗಕ್ಕೆ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Election-Duty--02

ಬೆಂಗಳೂರು, ಡಿ.11- ಮುಂಬರುವ ವಿಧಾನಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಕರ ಕೆಲಸದ ಹೊರೆ ಕಡಿಮೆ ಮಾಡಲು ನಿರುದ್ಯೋಗಿ ಪದವೀಧರರು/ಶಿಕ್ಷಕರು ಅಥವಾ ನಿವೃತ್ತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಂತೆ ಈಗಲ್ ಐ (ಹದ್ದಿನ ಕಣ್ಣು) ಎಂಬ ಸಾರ್ವಜನಿಕ ವ್ಯವಹಾರಗಳ ಸುಧಾರಣೆ ಸಂಘ ಚುನಾವಣಾ ಆಯೋಗಕ್ಕೆ ಸಲಹೆ ಮಾಡಿದೆ.  ತುರ್ತು ಸಂದರ್ಭಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೋಂ ಗಾರ್ಡ್‍ಗಳು, ಅರೆಸೇನಾ ಇತ್ಯಾದಿ ಸಿಬ್ಬಂದಿಯನ್ನು ನಿಯೋಜಿಸುವ ಮಾದರಿಯಲ್ಲೇ ಚುನಾವಣಾ ಆಯೋಗವು ಅರೆ ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಬೇಕು. ತಾತ್ಕಾಲಿಕವಾಗಿ ಪಿಂಚಣಿದಾರರು ಅಥವಾ ನಿರುದ್ಯೋಗಿಗಳನ್ನು ನೇಮಕ ಮಾಡಿಕೊಂಡು ತರಬೇತಿ ನೀಡಬೇಕು. ಆ ಮೂಲಕ ಚುನಾವಣೆ ಕಾರ್ಯಗಳಲ್ಲಿ ಶಿಕ್ಷಕರ ಮೇಲೆ ಬೀಳುವ ಅಧಿಕ ಕೆಲಸದ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಈಗಲ್ ಐ ಅಭಿಪ್ರಾಯಪಟ್ಟಿದೆ.

ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಪ್ರೊ.ಕೆ.ಪಿ.ಶ್ರೀನಾಥ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.  ಒಂದು ಹುದ್ದೆ, ಒಂದು ಶ್ರೇಣಿ, ಒಬ್ಬ ವ್ಯಕ್ತಿ, ಒಂದು ಬಡ್ತಿ ಎಂಬ ನಿಯಮಗಳು ವಿವಿದೆಡೆ ಅನ್ವಯವಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೆ ಒಬ್ಬ ವ್ಯಕ್ತಿ ಒಂದು ಕ್ಷೇತ್ರ ಎಂಬ ನಿಯಮ ಜಾರಿಗೆ ಬರಬೇಕು. ಎರಡು ಅಥವಾ ಅದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಬಾರದು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಸಮಯ, ಹಣ ಮತ್ತು ಶ್ರಮವನ್ನು ತಪ್ಪಿಸಬಹುದು ಎಂದು ಅವರು ಮನವಿ ಮಾಡಿದ್ದಾರೆ.

ದೇಶದಲ್ಲಿ ಅನಗತ್ಯ ಉಪ ಚುನಾವಣೆಗೆ ಅವಕಾಶ ನೀಡಬಾರದು. ಗುಜರಾತ್ ಮಾದರಿಯಂತೆ ನಿರ್ದಿಷ್ಟ ಸಂದರ್ಭಗಳಲ್ಲಿ ರಾಜ್ಯದಲ್ಲೂ ಆನ್‍ಲೈನ್ ಮತದಾನ ವ್ಯವಸ್ಥೆ ಜಾರಿಯಾಗಬೇಕು ಎಂಬಿತ್ಯಾದಿ ಸಲಹೆಗಳನ್ನು ಅವರು ನೀಡಿದ್ದಾರೆ.

Facebook Comments

Sri Raghav

Admin