ಚುನಾವಣೆ ಹಿನ್ನೆಲೆಯಲ್ಲಿ ಆರ್ ಆರ್ ನಗರದಲ್ಲಿ ನಿಷೇಧಾಜ್ಞೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

RR-Nagar

ಬೆಂಗಳೂರು, ಮೇ 24- ಅಕ್ರಮವಾಗಿ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಮೇ 28ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಆಯುಕ್ತರು ಕ್ಷೇತ್ರ ಹಾಗೂ ಸುತ್ತಮುತ್ತಲಿನ 14 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಮೇ 12ರಂದು ನಡೆಯಬೇಕಿದ್ದ ಚುನಾವಣೆ ಮತದಾರರ ಗುರುತಿನ ಚೀಟಿಗಳ ಅಕ್ರಮ ಸಂಗ್ರಹಣೆ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಚುನಾವಣೆ ಸ್ಥಗಿತಗೊಂಡಿತ್ತು. ಮೇ 28ರಂದು ಚುನಾವಣೆ ನಡೆದು ಮೇ 31ಕ್ಕೆ ಮತ ಎಣಿಕೆ ನಡೆಯಲಿದೆ. ಈ ಎರಡು ದಿನ ಸಿಆರ್‍ಪಿಸಿ 144 ಅಡಿ ನಿಷೇಧಾಜ್ಞೆ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಮೇ 26ರ ಬೆಳಗ್ಗೆ 5 ಗಂಟೆಯಿಂದ ಮೇ 28ರ ಮಧ್ಯರಾತ್ರಿ 12 ಗಂಟೆವರೆಗೂ, ಮತ ಎಣಿಕೆ ನಡೆಯುವ ಮೇ 31ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.  ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ, ಆರ್‍ಎಂಸಿಯಾರ್ಡ್, ರಾಜಗೋಪಾಲನಗರ, ಪೀಣ್ಯ, ನಂದಿನಿಲೇಔಟ್, ಮಹಾಲಕ್ಷ್ಮಿ ಲೇಔಟ್, ಜಾಲಹಳ್ಳಿ, ಗಂಗಮ್ಮನಗುಡಿ, ರಾಜರಾಜೇಶ್ವರಿನಗರ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ, ಬ್ಯಾಟರಾಯನಪುರ, ಅನ್ನಪೂರ್ಣೇಶ್ವರಿನಗರ, ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಟಿ.ಸುನೀಲ್‍ಕುಮಾರ್ ಅವರು ತಿಳಿಸಿದ್ದಾರೆ.

Facebook Comments

Sri Raghav

Admin