ಚುನಾವಣೆ ಹೊಸ್ತಿಲಲ್ಲೇ ಕರ್ನಾಟಕಕ್ಕೆ ಸುಪ್ರೀಂ ಶಾಕ್..! ತಮಿಳುನಾಡಿಗೆ ಕಾವೇರಿ ಬಿಡಲೇಬೇಕು

ಈ ಸುದ್ದಿಯನ್ನು ಶೇರ್ ಮಾಡಿ

Cauvery-Supreme--Court
ನವದೆಹಲಿ, ಮೇ 3-ವಿಧಾನಸಭೆ ಚುನಾವಣೆಗೆ ರಾಜ್ಯವು ಸಜ್ಜಾಗುತ್ತಿರುವ ಸಂದರ್ಭದಲ್ಲೇ ಕಾವೇರಿ ವಿವಾದವೂ ಕಾವೇರಿದೆ. ತಮಿಳುನಾಡಿಗೆ ಬಾಕಿ ಇರುವ 4 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಲೇಬೇಕೆಂದು ಸುಪ್ರೀಂಕೋರ್ಟ್ ಇಂದು ಆದೇಶ ನೀಡಿರುವುದು ರಾಜ್ಯದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸ್ಕೀಮ್ ಆದೇಶ ಪಾಲನೆಗೆ ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿ ಕುರಿತ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಸೋಮವಾರದೊಳಗೆ ಏಪ್ರಿಲ್ ಮತ್ತು ಮೇ ತಿಂಗಳ ತಮಿಳುನಾಡು ಪಾಲಿನ ನೀರನ್ನು ಕಡ್ಡಾಯವಾಗಿ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದೆ.

ಬಿಡುಗಡೆ ಮಾಡದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿರುವುದು ಪ್ರಸ್ತುತ ಸನ್ನಿವೇಶದಲ್ಲಿ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ಕಾವೇರಿ ಜಲಾನಯನ ಭಾಗದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಇನ್ನೆರಡು ತಿಂಗಳಿಗೆ ಬೆಂಗಳೂರು ಸೇರಿದಂತೆ ಆ ಭಾಗದ ನಗರ, ಪಟ್ಟಣಗಳಿಗೆ ಕುಡಿಯುವ ನೀರನ್ನೂ ಕೂಡ ಮಿತವಾಗಿ ಬಳಸಬೇಕಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೇ ಸುಪ್ರೀಂಕೋರ್ಟ್‍ನ ಈ ಆದೇಶ ರಾಜ್ಯದ ಪಾಲಿಗೆ ಮಾರಕವಾಗಿದೆ. ಮೇ 12 ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭದಲ್ಲೇ ಸುಪ್ರೀಂಕೋರ್ಟ್‍ನ ಈ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರ ಮಹತ್ವದ್ದಾಗಿದೆ. ಸರ್ಕಾರದ ನಿರ್ಧಾರವನ್ನೇ ಜನರೂ ಕೂಡ ಎದುರು ನೋಡುತ್ತಿದ್ದಾರೆ.

Facebook Comments

Sri Raghav

Admin