ಚೆಕ್ ನೀಡುವ ಮುನ್ನ ಎಚ್ಚರಿಕೆ : ಬೌನ್ಸ್ ಆದರೆ 1ತಿಂಗಳಲ್ಲೇ ಕಠಿಣ ಶಿಕ್ಷೆ..!
ನವದೆಹಲಿ, ಡಿ.25-ನೋಟು ರದ್ದತಿ ಹಿನ್ನೆಲೆ ಹಾಗೂ ನಗದುರಹಿತ ವಹಿವಾಟಿಗೆ ಉತ್ತೇಜನ ನೀಡಲು, ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನಿನಲ್ಲಿ ಮಹತ್ವದ ಬದಲಾವಣೆ ಮಾಡಲು ಗಂಭೀರ ಚಿಂತನೆ ನಡೆಸಿದೆ. ಚೆಕ್ ಬೌನ್ಸ್ ಆದ ಒಂದು ತಿಂಗಳ ಒಳಗೆ ಅದನ್ನು ನೀಡಿದವರಿಗೆ ಶಿಕ್ಷೆ ವಿಧಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬಜೆಟ್ ಪೂರ್ವ ಪ್ರಕ್ರಿಯೆಯ ಭಾಗವಾಗಿ ದೆಹಲಿಯಲ್ಲಿ ಉದ್ಯಮಿಗಳು ಮತ್ತು ವ್ಯಾಪಾರಿಗಳ ಸಂಘದ ನಿಯೋಗದೊಂದಿಗೆ ಕೇಂದ್ರ ಹಣಕಾಸು ಸಚಿವಾಲಯ ನಡೆಸಿದ ಸಭೆ ವೇಳೆ ಈ ಬಗ್ಗೆ ಸಲಹೆ-ಅಭಿಪ್ರಾಯಗಳು ವ್ಯಕ್ತವಾಗಿವೆ.
ಸಂಪ್ರದಾಯಿಕವಾಗಿ ಬಿಜೆಪಿಯ ಮತ ಬ್ಯಾಂಕ್ ಎಂದೇ ಪರಿಗಣಿಸಲ್ಪಟ್ಟಿರುವ ವ್ಯಾಪಾರಿಗಳು, ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಹಳೆ ನೋಟು ನಿಷೇಧ ನಿರ್ಧಾರದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪ್ರಧಾನಿ ನೀಡಿದ್ದ 50 ದಿನಗಳ ಗಡುವಿಗೆ ಐದು ದಿನಗಳು ಮಾತ್ರ ಬಾಕಿ ಇದ್ದು, ವಹಿವಾಟಿಗೆ ಧಕ್ಕೆ ಮತ್ತು ನೋಟು ಚಲಾವಣೆ ಕೊರತೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ವರ್ತಕರು ಹೆಚ್ಚುವರಿ ಖಾತರಿಯೊಂದಿಗೆ ಬ್ಯಾಂಕ್ ಚೆಕ್ಕುಗಳ ಮೂಲಕ ಹೆಚ್ಚಾಗಿ ವ್ಯಾಪಾರ-ವಹಿವಾಟು ನಡೆಸಲು ಆಸಕ್ತಿ ತೋರುತ್ತಿದ್ದಾರೆ. ಇದೇ ಕಾರಣಕ್ಕಾಗಿ ಈ ಸಮೂಹವು ಹಣಕಾಸು ಸಚಿವಾಲಯಕ್ಕೆ ಕೆಲವು ಸಲಹೆ ಮತ್ತು ಅಭಿಪ್ರಾಯಗಳನ್ನು ನೀಡಿವೆ. ಅದರಲ್ಲಿ ಚೆಕ್ ಬೌನ್ಸ್ ಪ್ರಕರಣಗಳನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
ವಹಿವಾಟಿಗಾಗಿ ನೀಡಲಾಗುವ ಚೆಕ್ಕುಗಳು ಅಗಾಗ ಬ್ಯಾಂಕ್ಗಳಲ್ಲಿ ತಿಪ್ಪರಲಾಗ ಹಾಕಿ ಹಿಂದಿರುಗುತ್ತಿರುವ ವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದ್ದು, ಚೆಕ್ ಬೌನ್ಸ್ ಆದ ಒಂದು ತಿಂಗಳ ಒಳಗೆ ಅದನ್ನು ನೀಡಿದವರಿಗೆ ಶಿಕ್ಷೆ ವಿಧಿಸಬೇಕೆಂದು ವರ್ತಕರ ಸಲಹೆಯಾಗಿದೆ. ವರ್ತಕರ ನಿರ್ದಿಷ್ಟ ಸಲಹೆಗಳನ್ನು ಗಣನೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಇದರ ಸಾಧಕ-ಭಾದಕಗಳನ್ನು ಪರಿಶೀಲಿಸುತ್ತಿದೆ. ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂಬುದು ಹಣಕಾಸು ಸಚಿವಾಲಯದ ಇರಾದೆಯಾಗಿದೆ. ಸಂಸತ್ತಿನ ಬಜೆಟ್ ಅಧಿವೇಶನ ವೇಳೆ ಈ ತಿದ್ದುಪಡಿ ಮಸೂದೆ ಜಾರಿಗೆ ಬರುವ ಸಾಧ್ಯತೆ ಇದೆ.
Eesanje News 24/7 ನ್ಯೂಸ್ ಆ್ಯಪ್ – Click Here to Download