ಜಗ್ಗೇಶ್ ಮತ್ತು ಪುನೀತ್ ಗೆ ಇಂದು ಜನ್ಮದಿನದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Jaggesh--01

ಬೆಂಗಳೂರು,ಮಾ.17- ಚಂದನವನದ ಇಬ್ಬರು ತಾರೆಯರಿಗೆ ಇಂದು ಜನ್ಮ ದಿನದ ಸಡಗರ ಸಂಭ್ರಮ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಅಸಂಖ್ಯಾತ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಈ ತಾರೆಯರಿಗೆ ಸ್ಯಾಂಡಲ್‍ವುಡ್‍ನ ಅನೇಕ ನಟ-ನಟಿಯರು ಮತ್ತು ತಂತ್ರಜ್ಞರು ಶುಭ ಕೋರಿದರು.   ಸ್ಯಾಂಡಲ್‍ವುಡ್‍ನ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಪುನೀತ್ ರಾಜ್‍ಕುಮಾರ್ ತಮ್ಮ 42ನೇ ಹುಟ್ಟುಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಅಪಾರ ಅಭಿಮಾನಿಗಳು ಮತ್ತು ಕುಟುಂಬಸ್ಥರ ನಡುವೆ ತಮ್ಮ ನಿವಾಸದಲ್ಲಿ ಆಚರಿಸಿಕೊಂಡರು.

ರಾತ್ರಿಯಿಂದಲೇ ಅಭಿಮಾನಿಗಳು ಪುನೀತ್ ಅವರ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಿದರು. ಬೃಹದಾಕಾರದ ಕೇಕ್‍ಗಳೊಂದಿಗೆ ತಂಡೋಪ ತಂಡವಾಗಿ ಬಂದಿದ್ದ ಅಭಿಮಾನಿಗಳು ಅಪ್ಪು ಅವರಿಂದ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದರು.   ವಸಂತಗೀತ, ಭಾಗ್ಯವಂತ,ಎರಡು ನಕ್ಷತ್ರ, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ ಮೊದಲಾದ ಚಿತ್ರಗಳಲ್ಲಿ ಬಾಲನಟನಾಗಿ ಗಮನ ಸೆಳೆದಿದ್ದ ಪುನೀತ್‍ಗೆ 1985ರಲ್ಲಿ ಬೆಟ್ಟದ ಹೂವು ಚಿತ್ರದ ಮನೋಜ್ಞ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿತು.
2002ರಲ್ಲಿ ಅಪ್ಪು ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡರು. ಅಭಿ, ಆಕಾಶ್, ನಮ್ಮ ಬಸವ, ವೀರ ಕನ್ನಡಿಗ, ಅರಸು, ಮಿಲನ, ಜಾಕಿ, ಪವರ್, ವಂಶಿ, ಪೃಥ್ವಿ, ರಾಜ್ ದಿ ಶೋಮನ್, ರಾಮ್ ರಣವಿಕ್ರಮ, ಅಣ್ಣಾಬಾಂಡ್, ದೊಡ್ಮನೆ ಹುಡುಗ, ನಿನ್ನಿಂದಲೇ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಪುನೀತ್ ನಾಯಕ ನಟನಾಗಿ ಮಾತ್ರವಲ್ಲದೆ ಗಾಯಕನಾಗಿಯೂ ಕೂಡ ಗುರುತಿಸಿಕೊಂಡಿದ್ದು, ಹಲವಾರು ಚಿತ್ರಗಳಿಗೆ ಹಿನ್ನೆಲೆ ಗಾಯಕನಾಗಿ ಅಭಿಮಾನಿಗಳನ್ನು ರಂಜಿಸಿದ್ದಾರೆ ಹಲವಾರು ಪ್ರಶಸ್ತಿ, ಪುರಸ್ಕಾರ ಸನ್ಮಾನಗಳಿಗೂ ಪಾತ್ರರಾಗಿದ್ದಾರೆ.
ಈಗಾಗಲೇ ಧ್ವನಿಸುರುಳಿ ಬಿಡುಗಡೆಗೊಂಡಿರುವ ರಾಜಕುಮಾರ ಚಿತ್ರವು ಮುಂದಿನ ವಾರ ತೆರೆ ಕಾಣಲಿದೆ. ಅಂಜನಿ ಪುತ್ರ, ಜೇಮ್ಸ್ ಎಂಬ ಚಿತ್ರಗಳೂ ಸೇಟ್ಟೇರಲಿವೆ.

ನವರಸ ನಾಯಕನಿಗೆ ಜನ್ಮದಿನದ ಸಂಭ್ರಮ:

ನವರಸ ನಾಯಕ ಜಗ್ಗೇಶ್ ಅವರು ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.   ಹಾಸ್ಯಪಾತ್ರಗಳಿಗೆ ಜೀವ ತುಂಬಿ ನಟಿಸುವಲ್ಲಿ ಸಿದ್ಧಹಸ್ತರಾಗಿರುವ ಜಗ್ಗೇಶ್ ಸಹನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.   ಭಂಡ ನನ್ನ ಗಂಡ ಚಿತ್ರದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ಸರ್ವರ್ ಸೋಮಣ್ಣ ಅಭಿನಯದಿಂದಾಗಿ ಅಪಾರ ಅಭಿಮಾನಿಗಳಲ್ಲಿ ನವರಸ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ.   ಸೂಪರ್ ನನ್ನಮಗ , ತರ್ಲೆ ನನ್ನಮಗ, ಜಿತೇಂದ್ರ, ಬೇವು-ಬೆಲ್ಲ , ಪಟೇಲ, ನರೇಂದ್ರ, ಇಂದ್ರನ ಗೆದ್ದ ನರೇಂದ್ರ, ಜಗತ್ ಕಿಲಾಡಿ, ವಾಸ್ತು ಪ್ರಕಾರ, ನೀರ್ ದೋಸೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.

ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿರುವ ಜಗ್ಗೇಶ್ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ ಅಲ್ಲದೆ ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿದ್ದು, ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin