‘ಜನಪ್ರತಿನಿಧಿಗಳೇ, ಅಧಿಕಾರಿಗಳೇ ನಿಮ್ಮ ಮಕ್ಕಳನ್ನು ಮೊದಲು ಸರ್ಕಾರಿ ಶಾಲೆಗೆ ಸೇರಿಸಿ’

ಈ ಸುದ್ದಿಯನ್ನು ಶೇರ್ ಮಾಡಿ

Konareddy--01

ಬೆಂಗಳೂರು, ಜೂ.19- ಕನ್ನಡ ಉಳಿಯಬೇಕಾದರೆ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವರು, ಶಾಸಕರು, ಅಧಿಕಾರಿಗಳ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತಹ ಸುತ್ತೋಲೆಯನ್ನು ಹೊರಡಿಸಿ ಎಂದು ಜೆಡಿಎಸ್‍ನ ಶಾಸಕ ಕೋನಾರೆಡ್ಡಿ ಆಗ್ರಹಿಸಿದರು. ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದ ಸ್ಥಿತಿ-ಗತಿಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿವೆ. ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಸಂಸ್ಥೆಗಳು ಹಣ ಸುಲಿಗೆ ಮಾಡುತ್ತಿವೆ. ಕಾನೂನು ರೂಪಿಸುವ ನಾವುಗಳು ಮೊದಲು ಇತರರಿಗೆ ಮಾದರಿಯಾಗಿರಬೇಕು. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಸುತ್ತೋಲೆ ಹೊರಡಿಸಬೇಕು ಎಂದರು.

ಸಾಲ ಮನ್ನಾ ವಿಷಯದಲ್ಲಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪ ಮಾಡದೆ ಸಾಲ ಮನ್ನ ನಿರ್ಧಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.  ಮಹದಾಯಿ ಹೋರಾಟ ಆರಂಭಗೊಂಡು 680 ದಿನ ಪೂರ್ಣಗೊಂಡಿದೆ. ಆದರೆ, ಈ ಬೇಡಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಪ್ರಧಾನಿ ಮಧ್ಯಪ್ರದೇಶಿಸಿ ವಿವಾದ ಇತ್ಯರ್ಥ ಪಡಿಸಬೇಕೆಂದು ನ್ಯಾಯಾಧೀಕರಣ ಸೂಚನೆ ನೀಡಿದೆ. ಅದೂ ಕೂಡ ಜಾರಿಯಾಗಿಲ್ಲ. ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಮಹದಾಯಿ ನೀರುಕೊಡಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಅರಣ್ಯ ಇಲಾಖೆ ಬೇಸಿಗೆ ಕಾಲದಲ್ಲಿ ಸಸಿ ನೆಡುವುದನ್ನು ಬಿಟ್ಟು ಮಳೆಗಾಲದಲ್ಲಿ ಸಸಿ ನೆಡಬೇಕು. ಈ ಮೂಲಕ ಅರಣ್ಯಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ತಾಲ್ಲೂಕಿಗೊಂದು ಕ್ರೀಡಾಂಗಣ ನಿರ್ಮಾಣಕ್ಕೆ 5 ಎಕರೆ ಭೂಮಿ ಕೊಡಿ ಎಂದು ಕೇಳಬೇಡಿ. ಭೂಮಿ ಖರೀದಿಗೆ ಅನುದಾನ ನೀಡಿ ಎಂದು ಒತ್ತಾಯಿಸಿದರು.  ನೀರಾವರಿ ಇಲಾಖೆಯಲ್ಲಿ ನಿರೀಕ್ಷಿತ ಸಾಧನೆ ಆಗಿಲ್ಲ ಎಂದು ಕೋನಾರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin