ಜನರ ದಿಕ್ಕು ತಪ್ಪಿಸುವ ಜಾಹಿರಾತುಗಳಲ್ಲಿ ನಟಿಸಿದರೆ ನಟ-ನಟಿಯರಿಗೆ ಭಾರೀ ದಂಡ-ನಿಷೇಧ
ನವದೆಹಲಿ,ನ.11-ಅತ್ಯಧಿಕ ಸಂಭಾವನೆ ಪಡೆದು ಜನರ ದಿಕ್ಕು ತಪ್ಪಿಸುವ ಜಾಹಿರಾತುಗಳಲ್ಲಿ ನಟಿಸುವ ನಟನಟಿಯರ ವಿರುದ್ಧ ಚಾಟಿ ಬೀಸಿರುವ ಕೇಂದ್ರ ಸರ್ಕಾರ ಭಾರೀ ದಂಡ ಮತ್ತು ನಿಷೇಧ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಆದರೆ ತಾರೆಯರಿಗೆ ಈ ಆರೋಪದಡಿ ಜೈಲು ಶಿಕ್ಷೆ ವಿಧಿಸುವುದರಿಂದ ವಿನಾಯಿತಿ ನೀಡಿದೆ. ಮೊದಲ ಬಾರಿಗೆ ತಪ್ಪು ಮಾಡುವ ತಾರೆಯರಿಗೆ 10 ಲಕ್ಷ ರೂ. ದಂಡ ಮತ್ತು ಒಂದು ವರ್ಷ ಚಿತ್ರೀಕರಣ ಚಟುವಟಿಕೆಯಿಂದ ನಿಷೇಧ ವಿಧಿಸಲು ಕೇಂದ್ರ ಸಚಿವರ ಸಮೂಹ ಇಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಶಿಕ್ಷೆ ನಂತರವೂ ಎರಡನೇ ಬಾರಿ ತಪ್ಪು ಎಸಗಿರುವುದು ಸಾಬೀತಾದರೆ 50 ಲಕ್ಷ ರೂ. ದಂಡ ಮತ್ತು ಐದು ವರ್ಷಗಳ ನಿಷೇಧ ವಿಧಿಸುವ ಕಠಿಣ ಕ್ರಮ ಜರುಗಿಸಲು ನಿರ್ಧರಿಸಿದೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ಒಂದೆಡೆ ನಟನಟಿಯರಿಗೆ ಅಧಿಕ ಸಂಭಾವನೆಗೆ ಕುತ್ತುಂಟಾಗಿದ್ದರೆ ಮತ್ತೊಂದೆಡೆ ಪ್ರಮುಖ ಉತ್ಪನ್ನ ತಯಾರಿಕಾ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅಶ್ಲೀಲ ಜಾಹಿರಾತುಗಳ ಮೇಲೆ ಕಡಿವಾಣ ಹಾಕಲು ಈ ಹಿಂದೆ ಕಠಿಣ ಕ್ರಮಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಈಗ ದಿಕ್ಕು ತಪ್ಪಿಸುವ ಪ್ರಚಾರಕ್ಕೆ ಲಗಾಮು ಹಾಕಿದೆ.
► Follow us on – Facebook / Twitter / Google+