ಜನರ ಹಕ್ಕು ರಕ್ಷಣೆಗಾಗಿ ಸೈನಿಕರಂತೆ ಸಜ್ಜಾಗಿ : ಭವಿಷ್ಯದ ವಕೀಲರಿಗೆ ಪ್ರಣಬ್ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Pranab-Mukharjeee

ಬೆಂಗಳೂರು, ಆ.28-ನಮ್ಮ ದೇಶದ ಜನರ ಹಕ್ಕುಗಳು ಮತ್ತು ಹಿತಾಸಕ್ತಿಯನ್ನು ರಕ್ಷಿಸಲು ಕಾನೂನು ವಿದ್ಯಾರ್ಥಿಗಳು ಯೋಧರಂತೆ ಹೋರಾಡಬೇಕೆಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದಿಲ್ಲಿ ಕರೆ ನೀಡಿದರು. ನ್ಯಾಷನಲ್ ಲಾ ಸ್ಕೂಲ್ ಆಫ್ ಯೂನಿವರ್ಸಿಟಿಯ 24ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಭವಿಷ್ಯ ರೂಪಿಸುವ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲೂ ಇದೆ. ಪ್ರಜಾಪ್ರಭುತ್ವ ಬಲಗೊಳಿಸುವ ಹಾಗೂ ದೇಶದಲ್ಲಿ ಸ್ಥಿರತೆ ಕಾಪಾಡುವ ದೃಷ್ಟಿಯಿಂದ ಕಾನೂನು ವಿದ್ಯಾರ್ಥಿಗಳು ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.  ಸಂವಿಧಾನದ ಮೂಲ ಆಶಯವನ್ನು ಕಾನೂನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಹೆಚ್ಚಿಸುವ ರೀತಿ ಕಾರ್ಯ ನಿರ್ವಹಿಸಬೇಕೆಂದು ಸಲಹೆ ಮಾಡಿದ್ದಾರೆ. ದುರ್ಬಲ ವರ್ಗದವರು ಸೇರಿದಂತೆ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಅದಕ್ಕೆ ಧಕ್ಕೆ ಬರದಂತೆ ಕಾರ್ಯ ನಿರ್ವಹಿಸಿ ಎಂದು ರಾಷ್ಟ್ರಪತಿಗಳು ಸಲಹೆ ಮಾಡಿದರು.

ಭಾರತದ ಸಂವಿಧಾನದ ಸತ್ವವಾದ ಸಮಾನತೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಬೇಕೆಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದರು.  ಸಮಕಾಲೀನ ಸವಾಲುಗಳನ್ನು ಎದುರಿಸುವಲ್ಲಿ ಇಂಥ ವಿಶ್ವವಿದ್ಯಾನಿಲಯಗಳು ಮುಂಚೂಣಿಗೆ ಬರಬೇಕು, ನಮ್ಮ ದೇಶದ ನಾಗರಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಸರ್ವರೂ ಸಮಾನರು ಎಂಬ ವಾಕ್ಯವನ್ನು ಅನುಷ್ಠಾನಕ್ಕೆ ತರಲು ವಿದ್ಯಾರ್ಥಿ ಸಮುದಾಯವು ಕೈ ಜೋಡಿಸಬೇಕೆಂದು ಅವರು ಕಿವಿಮಾತು ಹೇಳಿದರು.  ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್, ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin