ಜನಾರ್ದನರೆಡ್ಡಿ ಜತೆ ಯಾವುದೇ ಮಾತುಕತೆ ನಡೆಸಿಲ್ಲ : ಹೆಚ್ಡಿಕೆ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--02
ದಾವಣಗೆರೆ ಏ.1- ಜನಾರ್ದನರೆಡ್ಡಿ ಜತೆ ನಾನು ಮಾತುಕತೆ ನಡೆಸಿಲ್ಲ. ಅಂತಹ ಯಾವುದೇ ಪ್ರಯತ್ನಗಳು ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭವಾಗಿರುವುದರಿಂದ ಮಾಧ್ಯಮಗಳು ಇಂತಹ ತಮಾಷೆಗಳನ್ನು ಮಾಡಬಾರದು. ಇದು ಕಾರ್ಯಕರ್ತರ ಮೇಲೆ ವ್ಯತಿರಿಕ್ತ ಸಂದೇಶ ಬೀರುತ್ತವೆ ಎಂದು ಹೇಳಿದರು.ಗ್ರಾಫಿಕ್ ಡಿಜೈನ್ ಮಾಡಿರುವುದನ್ನು ಟಿವಿಗಳಲ್ಲಿ ತೋರಿಸುತ್ತಾರೆ. ನಾವು ಮಾತುಕತೆಯ ಪ್ರಯತ್ನಗಳನ್ನು ಮಾಡಿಲ್ಲ ಎಂದು ಅವರು ಹೇಳಿದರು.

ಚುನಾವಣಾ ಆಯೋಗದ ಅಧಿಕಾರಿಗಳು ನಿಜವಾಗಿ ಹಣ ರವಾನೆ ಮಾಡುವವರನ್ನು ಬಿಟ್ಟು ಇಲ್ಲದವರ ಬಳಿ ಶೋಧ ನಡೆಸುತ್ತಿದ್ದಾರೆ. ನನ್ನ ಕಾರಿನಲ್ಲಿದ್ದ ಶೇವಿಂಗ್ ಕಿಟ್ಅನ್ನೂ ಬಿಡದೆ ಚೆಕ್ ಮಾಡಿದ್ದಾರೆ. ಇದರಲ್ಲಿ ದುಡ್ಡು ಇಟ್ಟುಕೊಂಡು ಬರಲು ಸಾಧ್ಯವೇ? ಆ ಕನಿಷ್ಟ ಜ್ಞಾನ ಅವರಿಗಿಲ್ಲವೆ ಎಂದು ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಪೊಲೀಸ್ ವಾಹನಗಳಲ್ಲಿ ಹಣ ಹೋಗುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತಿಲ್ಲ ಎಂದು ಹೇಳಿದರು. ಕಳೆದ ರಾತ್ರಿ ನನ್ನ ಕಾರ್ಯಕರ್ತರ ಮನೆಯಲ್ಲಿ ಊಟಕ್ಕೆ ಹೋಗಲು ಚುನಾವಣಾ ನೀತಿ-ಸಂಹಿತೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಹಾಗಾದರೆ ನಾನು ಉಪವಾಸ ಮಲಗಬೇಕಾ? ಕಾರ್ಯಕರ್ತರ ಮನೆಯಲ್ಲಿ ಊಟ ಮಾಡಬಾರದಾ ಎಂದು ಪ್ರಶ್ನಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕೀಯದ ಪ್ರಶ್ನೆಯೇ ಇಲ್ಲ. ಜೆಡಿಎಸ್ ನೇರ ಸ್ಪರ್ಧೆ. ಸಿಎಂಗೆ ಈಗಾಗಲೇ ನನ್ನ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ ಎಂಬ ಅರಿವಾಗಿದೆ. ಅದಕ್ಕಾಗಿ ಅವರು ಅಲ್ಲಿಯೇ ವಾಸ್ತವ್ಯ ಹೂಡಿ ಪ್ರಚಾರ ನಡೆಸುತ್ತಿದ್ದಾರೆ. ಆ ಕ್ಷೇತ್ರದ ಜನ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು. ರಾಜಸ್ಥಾನದ ಪೋಕ್ರೋನ್ನಲ್ಲಿ ಮೃತಪಟ್ಟಿದ್ದ ಯೋಧ ಹರಿಹರದ ಜಾವಿದ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

Facebook Comments

Sri Raghav

Admin