ಜನ್ಮದಿನದಂದೇ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಸ್ಪದ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Anurag-tiwary

ಲಖ್ನೋ/ಬೆಂಗಳೂರು,ಮೇ 17-ರಾಜ್ಯಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣ ಮರೆಮಾಚುವ ಮುನ್ನ ಮತ್ತೊಬ್ಬ ಐಎಎಸ್ ಅಧಿಕಾರಿ ಅದೇ ರೀತಿ ಸಂಶಯಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.  ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತ ಕರ್ನಾಟಕ ಕೇಡರ್‍ನ ಕಿರಿಯ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ(36) ಅವರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು , ಉತ್ತರ ಪ್ರದೇಶದ ರಾಜಧಾನಿ ಲಖ್ನೋದಲ್ಲಿ ಮೃತದೇಹ ಪತ್ತೆಯಗಿದೆ.   ಲಖ್ನೋದ ಮೀರಾಬಾಯಿ ಅತಿಥಿ ಗೃಹದ ಹೊರಭಾಗದ ಹಜರತ್‍ಗಂಜ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಅನುರಾಗ್ ತಿವಾರಿ ಮೃತದೇಹ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಸಾಕಷ್ಟು ಸಂದೇಹಗಳು ಮೂಡಿವೆ.ಅವರ ದೇಹದ ಕಪಾಳ ಮತ್ತಿತರ ಕಡೆ ಸಣ್ಣಪುಟ್ಟ ಗಾಯಗಳಾಗಿದ್ದು, ಇದು ಕೊಲೆ ಇಲ್ಲವೇ ಆತ್ಮಹತ್ಯೆಯೇ ಎಂಬುದನ್ನು ಮರಣೋತ್ತರ ಪರೀಕ್ಷೆ ನಂತರವೇ ತಿಳಿಯಲಿದೆ ಎಂದು ಹಜರತ್‍ಗಂಜ್ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಎ.ಕೆ.ಶಾಹಿ ತಿಳಿಸಿದ್ದಾರೆ.   ಕೆಲವು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವ ಕಾರಣಕ್ಕಾಗಿ ಘಟನೆ ನಡೆದಿದೆ ಎಂಬುದು ತನಿಖೆಯ ನಂತರ ತಿಳಿದುಬರಲಿದೆ. ಅಧಿಕಾರಿಯ ಸಾವು ಸಾಕಷ್ಟು ಸಂಶಯದಿಂದ ಕೂಡಿದೆ ಎಂದು ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ನಾನು ಬೆಳಗ್ಗೆ ತಿವಾರಿ ಅವರು ಕೊಠಡಿಯಿಂದ ಮೆಟ್ಟಿಲುಗಳನ್ನು ಇಳಿದು ಕೆಳ ಬರುತ್ತಿದ್ದನ್ನು ನೋಡಿದೆ. ಗೋಮ್ತಿ ನಗರದಲ್ಲಿ ಬ್ಯಾಡ್ಮಿಂಟನ್ ಆಡಲು ತೆರಳಬೇಕಿತ್ತು. 300 ಕಿ.ಮೀ ಅಂತರದಲ್ಲಿ ತಿವಾರಿ ದೇಹ ಬಿದ್ದಿತ್ತು ಎಂದು ಅವರ ಸ್ನೇಹಿತ ಪಿ.ಎನ್.ಸಿಂಗ್ ತಿಳಿಸಿದ್ದಾರೆ.
ಇದು ರಸ್ತೆ ಅಪಘಾತವೋ, ದಾಳಿಯೋ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಇದೊಂದು ಅಸಹಜ ಸಾವು ಆಗಿರುವುದರಿಂದ ತನಿಖೆ ನಂತರ ಎಲ್ಲ ಮಾಹಿತಿ ಹೊರಬೀಳಲಿದೆ. ಪೋಷಕರು ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

 
ಜನ್ಮದಿನದಂದೇ ಸಾವು: ಇಂದು 36ನೇ ವರ್ಷಕ್ಕೆ ಕಾಲಿಡುತ್ತಿದ್ದ ಅನುರಾಗ್ ತಿವಾರಿ ಹುಟ್ಟಹಬ್ಬದ ದಿನದಂದೇ ಸಾವನ್ನಪ್ಪಿದ್ದಾರೆ. 2007ರ ಕರ್ನಾಟಕ ಕೇಡರ್‍ನ ಐಎಎಸ್ ಅಧಿಕಾರಿಯಾಗಿದ್ದ ತಿವಾರಿ ಪ್ರಸ್ತುತ ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.  ಕಳೆದ ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್ ಗೌಸ್‍ನ ಕೊಠಡಿ ಸಂಖ್ಯೆ 16ರಲ್ಲಿ ತಂಗಿದ್ದ ತಿವಾರಿ ಅವರು ಇಂದು ಬೆಳಗ್ಗೆ 50 ಮೀಟರ್ ದೂರದ ರಸ್ತೆಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.   ಶವವನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಹಿರಿಯ ಪೊಲೀಸರು ಅಧಿಕಾರಿಗಳು ಅವರ ಬಳಿ ಪರ್ಸ್‍ನಲ್ಲಿದ್ದ ವಿಸಿಟಿಂಗ್ ಕಾರ್ಡ್‍ಗಳನ್ನು ಪರಿಶೀಲಿಸಿದಾಗ ಐಎಎಸ್ ಅಧಿಕಾರಿ ಎಂಬುದು ಗೊತ್ತಾಗಿದೆ.

 
ಕೂಡಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‍ಚಂದ್ರ ಕುಂಟಿಯಾ ಅವರನ್ನು ಸಂಪರ್ಕಿಸಿದ ಲಖ್ನೋ ನಗರ ಪೊಲೀಸ್ ಆಯುಕ್ತರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.  ಅನುರಾಗ್ ತಿವಾರಿ ಅವರು ಮೂಲತಃ ಉತ್ತರಪ್ರದೇಶದ ಬಾಹ್ರಿಚ್ ಜಿಲ್ಲೆಯವರು. ಬಿಟೆಕ್ ಪದವೀಧರರಾಗಿದ್ದ ಅವರು 2007ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.   ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮೊದಲು ಉಪವಿಭಾಗಾಧಿಕಾರಿ(ಎಸಿ)ಯಾದ ಬಳಿಕ 2009ರಲ್ಲಿ ಐಎಎಸ್ ಹುದ್ದೆ ಖಾತ್ರಿಯಾದ ನಂತರ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಅವರನ್ನು ಆಹಾರ ಮತ್ತು ನಾಗರಿಕ ಇಲಾಖೆಯ ಆಯುಕ್ತರ ಹುದ್ದೆಗೆ ಸರ್ಕಾರ ವರ್ಗಾವಣೆ ಮಾಡಿತ್ತು.

 
ಕುಟುಂಬದಲ್ಲಿ ಒಡಕು: ಮೂಲಗಳ ಪ್ರಕಾರ ಅನುರಾಗ್ ತಿವಾರಿ ಅವರ ವೈವಾಹಿಕ ಜೀವನದಲ್ಲಿ ಮನಃಸ್ತಾಪ ಉಂಟಾಗಿತ್ತೆಂದು ತಿಳಿದುಬಂದಿದೆ. ಪತ್ನಿ ಜೊತೆ ವಿರಸ ಉಂಟಾಗಿ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.  ಹೆಚ್ಚಿನ ತರಬೇತಿಗಾಗಿ ಅವರು ಲಖ್ನೋಗೆ ತೆರಳಿದ್ದರು. ಕೆಲವು ಕಾರಣಗಳಿಗಾಗಿ ನಾಲ್ಕು ವಾರಗಳ ಕಾಲ ರಜಾ ವಿಸ್ತರಿಸಿಕೊಂಡಿದ್ದರು.

 

ಮುಖ್ಯಮಂತ್ರಿಗೆ ಮಾಹಿತಿ: ಘಟನೆ ಕುರಿತಂತೆ ರಾಜ್ಯದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ.
ಲಖ್ನೋದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸರ್ಕಾರದ ಪರವಾಗಿ ಡಿಪಿಎಆರ್ ಅಧಿಕಾರಿಗಳು ಲಖ್ನೋಗೆ ತೆರಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin