ಜಮೀನು ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

belgam4

ಅಮ್ಮಿನಗಡ,ಆ.27- ಮರೋಳ ಏತ ನೀರಾವರಿ ಯೋಜನೆಯ ಒಂದನೇ ಹಂತದ ಕಾಮಗಾರಿಗಳಿಗಾಗಿ ಜಮೀನು ಕಳೆದುಕೊಂಡಿರುವ ರೈತರಿಗೆ ತಕ್ಷಣವೇ ಕಾನೂನಾತ್ಮಕ ಪರಿಹಾರ ನೀಡದಿದ್ದರೆ ಸರಕಾರದ ರೈತ ವಿರೋಧಿ ಧೋರಣೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಇಳಕಲ್ ಜನ ಜಾಗೃತಿ  ವೇದಿಕೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆಗಳು ಎಚ್ಚರಿಕೆ ನೀಡಿವೆ.ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್‍ನವರು ಇದೀಗ ಹಿಂದೆ ಬಿಜೆಪಿಯವರು ಮಾಡಿದ ತಪ್ಪುಗಳನ್ನು ಸರಿಪಡಿಸುತ್ತಿಲ್ಲ.

ಬದಲಾಗಿ ಹುನಗುಂದ ತಾಲೂಕಿನಲ್ಲಿನ ರೈತ ಸಮುದಾಯಕ್ಕೆ ಭಾರೀ ಅನ್ಯಾಯ ಮಾಡುತ್ತಿದ್ದಾರೆ ಎಂದು ವೇದಿಕೆಯ ನಾಗರಾಜ ಹೊಂಗಲ್, ಯಲ್ಲಪ್ಪ ಪೂಜರ, ಜಗದೀಶ ಸರಾಫ, ಕರವೇದ ಮಲ್ಲು ಮಡಿವಾಳರ, ನಾಗರಾಜ ನಗರಿ ಮತ್ತಿತರರು ಸುದ್ದಿಗಾರರಿಗೆ ತಿಳಿಸಿದರು. ಹಿಂದೆ ಬಿಜೆಪಿ ಸರಕಾರ, ಕಾಮಗಾರಿಗಳು ಅಪೂರ್ಣವಿರುವಾಗಲೇ ಮರೋಳ ಯೋಜನೆಯ ಮೊದಲ ಹಂತದ ಯೋಜನೆಯನ್ನು ಲೋಕಾರ್ಪಣೆ ಮಾಡಿತ್ತು. ಕಾಮಗಾರಿಗಳಿಗಾಗಿ ಜಮೀನು ಕಳೆದುಕೊಂಡ ರೈತರಿಗೆ ತಿಳುವಳಿಕೆ ಅಂದರೆ ನೋಟಿಸ್ ನೀಡಿದ ನಂತರ ಇತರೆ ಪ್ರಕ್ರಿಯೆಗಳನ್ನೆಲ್ಲ ಅಂತಿಮಗೊಳಿಸಿ ರೈತರಿಗೆ ಪರಿಹಾರ ನೀಡಿದ ನಂತರ ಕಾಲುವೆ ಕಾಮಗಾರಿಗಳನ್ನು ಮಾಡಬೇಕು ಎಂದರು.

ಆದರೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ರೈತರಿಗೆ ಯಾವುದೇ ತಿಳುವಳಿಕೆ ನೋಟಿಸ್ ಕೊಡದೇ ಕಾಲುವೆ ಕಾಮಗಾರಿ ನಡೆಸಿದ್ದಾರೆ. ರೈತರು ಇದನ್ನು ಆರಂಭದಲ್ಲಿಯೇ ವಿರೋಧಿಸಿದ್ದರು. ಆಗ ಅಂದಿನ ಶಾಸಕ ದೊಡ್ಡನಗೌಡರು ಸಹಕಾರ ಕೊಡುವಂತೆ ರೈತರಿಗೆ ಕೇಳಿಕೊಂಡಿದ್ದರು. ಸಹಕರಿಸಿದ ರೈತರನ್ನು ಅನಂತರ ಮಾತನಾಡಿಸಲೇ ಇಲ್ಲ. ಇದೀಗ ಶಾಸಕ ವಿಜಯಾನಂದರು ಸಹ ಸಂತ್ರಸ್ತ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.  ಇದರಿಂದ ರೊಚ್ಚಿಗೆದ್ದಿರುವ ರೈತರು ಮರೋಳ ಏತ ನೀರಾವರಿ ಯೋಜನೆ ಪಶ್ಚಿಮ ಕಾಲುವೆಯ 36ನೇ ಕಿ.ಮೀ., ನಂತರದಲ್ಲಿ ಮಾಲೀಕ ಮಲ್ಲಪ್ಪ ಶಿವಬಸಪ್ಪ ನಾಲತವಾಡ, ಮಲ್ಲಪ್ಪ ಮಹಾಂತಪ್ಪ ಬಿಸರೆಡ್ಡಿ ಹಾಗೂ ಫಕೀರವ್ವ ಎಮ್ ಉಮಚಗಿ ಅವರು ಕಾಲುವೆಯನ್ನು ಮುಚ್ಚಿ ಹಾಕಿದ್ದಾರೆ. ಹೀಗೆ ಕಾಲುವೆ ಮುಚ್ಚಿರುವ ರೈತರಿಗೆ ಕೆಬಿಜೆಎನ್‍ಎಲ್ ಅಧಿಕಾರಿಗಳು ಜಮೀನು ವಶಪಡಿಸಿಕೊಳ್ಳುವ ಕುರಿತು ಇದುವರೆಗೆ ನೋಟಿಸ್ ಸಹ ನೀಡಿಲ್ಲ.

ಇದು ಸರಕಾರ ರೈತರ ಬಗ್ಗೆ ತಳೆದಿರುವ ಅತಿ ನಿರ್ಲಕ್ಷ್ಯ ಧೋರಣೆಯನ್ನು ತೋರುತ್ತದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಹೀಗೆ ಕಾಲುವೆ ಮುಚ್ಚಿರುವುದರಿಂದ ಮುಖ್ಯ ಕಾಲುವೆಯ ಅಕ್ಕಪಕ್ಕದ ರೈತರಿಗೆ ಸಿಗುತ್ತಿದ್ದ ಅಲ್ಷ ಸ್ವಲ್ಪ ನೀರು ಸಹ ಸಿಗದಂತಾಗಿದೆ. ಇದು ಅಧಿಕಾರಿಗಳ ಬೇಜವಬ್ದಾರಿತನದ ಪರಮಾವಧಿಯಾಗಿದೆ. ಕೆಬಿಜೆಎನ್‍ಎಲ್ ಅಧಿಕಾರಿಗಳು ಈ ರೈತರಿಗೆ ನಿಯಮಾನುಸಾರ ಪರಿಹಾರ ನೀಡಿಕೆ ಪ್ರಕ್ರಿಯೆನ್ನು ತಕ್ಷಣವೇ ಲಿಖಿತವಾಗಿ ಘೋಷಿಸಬೇಕು. ಇಲ್ಲದಿದ್ದರೆ ಕೆಬಿಜೆಎನ್‍ಎಲ್ ಅಧಿಕಾರಿಗಳಿಗೆ ದಿಗ್ಭಂಧನ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin